ಚಿತ್ರದುರ್ಗ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಲು, ಮಾದರಿ ಕುಟುಂಬ ಅನುಸೂಚಿಯ 3.61 ಲಕ್ಷ ನಮೂನೆಗಳನ್ನು ಪ್ರತಿ ಮನೆಗೆ ಭೇಟಿ ನೀಡಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಸಮೀಕ್ಷೆ ಸಂಬಂಧ 60 ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗಿದೆ. ಸಮೀಕ್ಷೆ ಪೂರ್ವ, ಸಮೀಕ್ಷೆಗೆ ಮಾಹಿತಿ ಒದಗಿಸಲು ಸಾರ್ವಜನಿಕರು ಯಾವ ದಾಖಲೆಗಳಿರಬೇಕು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾದರಿ ಕುಟುಂಬ ಅನುಸೂಚಿ ನಮೂನೆಗಳನ್ನು ಆಯಾ ತಾಲೂಕು ಆಶಾ ಕಾರ್ಯಕರ್ತೆಯರು ವಿತರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗ ತಾಲೂಕಿಗೆ 1,40,000, ಚಳ್ಳಕೆರೆ-50,000, ಹಿರಿಯೂರು-50,000, ಹೊಸದುರ್ಗ-40,000, ಹೊಳಲ್ಕೆರೆ-50,000 ಮತ್ತು ಮೊಳಕಾಲ್ಮೂರು ತಾಲೂಕಿಗೆ 31,000 ಪ್ರತಿಗಳು ಹಂಚಿಕೆಯಾಗಿವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ತಂತ್ರಾಂಶ- ಜಾಗೃತಿ ಅಭಿಯಾನ ತರಬೇತಿ ನೀಡಿದೆ.
ಈ ಕುಟುಂಬ ಅನುಸೂಚಿ ನಮೂನೆಗಳನ್ನು ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾಮುಖ್ಯತೆ ಮತ್ತು ಸಮೀಕ್ಷೆಗೆ ಅಗತ್ಯವಿರುವ ಹಾಗೂ ಕುಟುಂಬ ಮುಖ್ಯಸ್ಥರ ವಿವರ, ಆಧಾರ್‌ಸಂಖ್ಯೆ ಹಾಗೂ ಆಧಾರ್ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರುವ ಬಗ್ಗೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಅಂಗವಿಕಲರಾಗಿದ್ದರೆ ಯುಡಿಐಡಿ ನಂಬರ್, ಶೈಕ್ಷಣಿಕ ವಿದ್ಯಾಭ್ಯಾಸ, ಮೀಸಲಾತಿ ವಿವರಗಳು ಹಾಗೂ ಕೃಷಿ ಸಂಬಂಧಿಸಿದ ಚಟುವಟಿಕೆಗಳ ಮಾಹಿತಿಯನ್ನು ಮೊದಲೇ ಸಿದ್ಧಪಡಿಸಿಟ್ಟುಕೊಳ್ಳಲು ನಮೂನೆಗಳನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ಕೆ ಕೈಜೋಡಿಸಿ ಸಮೀಕ್ಷೆ ಕಾರ್ಯ ಸುಗಮ ಹಾಗೂ ವೇಗವಾಗಿ ನಡೆಯಲು ಸಹಕರಿಸಬೇಕೆಂದು ಡಿಸಿ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.