ಜಿಲ್ಲೆ

ಜಿಲ್ಲೆಯಲ್ಲಿ 2 ಲಕ್ಷ ರಾಷ್ಟ್ರಧ್ವಜ ಹಾರಾಟದ ಗುರಿ

ಚಿಕ್ಕಮಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಆ.13ರಿಂದ 15ರವರೆಗೆ ಹರ್ ಘರ್ ತಿರಂಗಾ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಮನೆ, ಉದ್ಯಮ, ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಕರೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ,ಜಿಲ್ಲೆಯಲ್ಲಿ 2 ಲಕ್ಷ ರಾಷ್ಟ್ರಧ್ವಜ ಹಾರಾಟದ ಗುರಿ ಹೊಂದಲಾಗಿದೆ. ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಗಿದ್ದು ಅದರಂತೆ ಹಗಲಿನಂತೆ ರಾತ್ರಿಯೂ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಲಾಗಿದೆ. ಪ್ಲಾಸ್ಟಿಕ್ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳಿಂದ ತಯಾರಿಸಿದ ಧ್ವಜ ಬಳಸಬಹುದು. ಹಾಗಾಗಿ ಶಾಲೆ-ಕಾಲೇಜುಗಳು, ಗ್ರಾಪಂ ಕಚೇರಿ, ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು, ಮನೆ, ಉದ್ಯಮ, ವಾಣಿಜ್ಯ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಹೇಳಿದರು.

ಆ.13ರ ಬೆಳಗ್ಗೆ 6 ಗಂಟೆಯಿಂದ ಆ.15ರ ಸಂಜೆ 6 ರವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಲಾಗಿದೆ. ಮನೆ ಅಥವಾ ಕಟ್ಟಡ ಮೇಲ್ಭಾಗದಲ್ಲಿ ಕಟ್ಟಬೇಕು. ಆ.15ರ ನಂತರ ರಾಷ್ಟ್ರಧ್ವಜವನ್ನು ಇಳಿಸಿ ಸುರಕ್ಷಿತವಾಗಿಡಬೇಕು. ಸರ್ಕಾರದ ಹಿಂದಿನ ಆದೇಶದಂತೆ ಆ.11ರಿಂದ 17ರವರೆಗೆ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಬಳಿಕ ಇದನ್ನು ಆ.13ರಿಂದ 15ರವರೆಗೆ ನಡೆಸಲು ಆದೇಶಿಸಲಾಗಿದೆ ಎಂದರು.

ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಸರ್ಕಾರಿ ನೌಕರರು ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳಬೇಕು. ತಮ್ಮ ಇಲಾಖೆ ವ್ಯಾಪ್ತಿಯ ಸಾರ್ವಜನಿಕರಿಗೂ ಧ್ವಜಗಳನ್ನು ವಿತರಿಸಬೇಕು ಎಂದು ಹೇಳಿದರು.

ಎಸ್ಪಿ ಎಂ.ಎಚ್.ಅಕ್ಷಯ್ ಮಾತನಾಡಿ, ಆ.13ರಂದು ಜಿಲ್ಲಾ ಆಟದ ಮೈದಾನದಲ್ಲಿ ಸಾರ್ವಜನಿಕರನ್ನು ಒಳಗೊಂಡಂತೆ ರಾಷ್ಟ್ರಧ್ವಜ ಪ್ರದರ್ಶಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.