ಘಟಪ್ರಭಾ: ಬೆಳಗಾವಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ ಷಾ ಜಿಲ್ಲೆಯ ಎಲ್ಲ ನಾಯಕರ ಸಭೆ ನಡೆಸಿ ಬೂಸ್ಟರ್ ಡೋಸ್ ನೀಡಿದ್ದಾರೆ. ಎಲ್ಲ ನಾಯಕರು ವೈಮನಸ್ಸು ಬಿಟ್ಟು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ತಿಳಿಸಿದ್ದು, ಜಿಲ್ಲೆಯಲ್ಲಿ ಕನಿಷ್ಠ ಹದಿನೈದು ಸ್ಥಾನ ಗೆಲ್ಲಿಸಲು ಪ್ರಯತ್ನಿಸುವುದಾಗಿ ವರಿಷ್ಠರಿಗೆ ತಿಳಿಸಿದ್ದೇವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಪಕ್ಷದ ವರಿಷ್ಠರ ಕನಸು ನನಸು ಮಾಡಲು ನಾನು ಸಿದ್ಧನಿದ್ದೇನೆ. ಷಾ ಸೂಚನೆಯಂತೆ ಕಾರ್ಯನಿರ್ವಹಿಸುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳು ಆಮಿಷ ಒಡ್ಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಅವರ ಆಮಿಷಗಳಿಗೆ ಒಳಗಾಗದಿರಿ. ಮೂರು ವರ್ಷದಲ್ಲಿ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ನಾಯಕರು ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಾರೆ. ನಾನು ಪಕ್ಷಾಂತರ ಆಗುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವರ ಮಾತಿಗೆ ಕಿವಿಗೊಡದಿರಿ. ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯೋಣ ಎಂದರು. ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪಕ್ಷ ಜವಾಬ್ದಾರಿ ನೀಡಿದ್ದು,
ಎಲ್ಲ ಮುಖಂಡರು, ಹಿರಿಯರು ಅವರ ಬೆನ್ನ ಹಿಂದೆ ನಿಂತು ಅವರನ್ನು ಆಯ್ಕೆ ಮಾಡೋಣ. ಇಪ್ಪತ್ತೈದು ವರ್ಷಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರು ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಪಕ್ಷದ ಮುಖಂಡರಾದ ರಾಮಣ್ಣ ಹುಕ್ಕೇರಿ, ಸುಭಾಸ ಪಾಟೀಲ ಹಾಗೂ ಸುರೇಶ ಪಾಟೀಲ ಮಾತನಾಡಿ, ಜಾರಕಿಹೊಳಿ ಸಹೋದರರು ಬಿಜೆಪಿ ಬಲ ಹೆಚ್ಚಿಸಿದ್ದಾರೆ. ಸರ್ವ ಸಮಾಜವನ್ನು ಒಗ್ಗೂಡಿಸಿ ಮುನ್ನಡೆಸುತ್ತಿದ್ದಾರೆ. ಕೆಲವರು ಇಂಥ ಬಸವತತ್ವವಾದಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಕೊಣ್ಣೂರ ಪಪಂ ಅಧ್ಯಕ್ಷೆ ಮಂಗಲಾ ತೇಲಿ, ಉಪಾಧ್ಯಕ್ಷ ಅಶೋಕ ನಾಯಿಕ, ಎಂ. ಎಲ್. ತೋಳಿನವರ, ಬಿಜೆಪಿ ಪದಾಧಿಕಾರಿಗಳಾದ ಬಸವರಾಜ ಹಿರೇಮಠ, ಗಣುಸಿಂಗ್ ರಜಪೂತ, ಜಯಾನಂದ ಹುಣಚ್ಯಾಳ, ಪರಶುರಾಮ ಗೊಡಿ, ಸುರೇಶ ಪಾಟೀಲ, ಕರುಣಾ ಗರುಡಕರ, ರಾಮಣ್ಣ ಹುಕ್ಕೇರಿ, ಡಿ.ಎಂ.ದಳವಾಯಿ, ಸುರೇಶ ಕಾಡದವರ, ಬಿಜೆಪಿ ಪದಾಧಿಕಾರಿಗಳು ಇದ್ದರು. ಪ್ರಕಾಶ ಕರನಿಂಗ ಸ್ವಾಗತಿಸಿದರು. ಎ.ಜಿ.ಕೋಳಿ ನಿರೂಪಿಸಿ, ವಂದಿಸಿದರು.
ಬೆಂಗಳೂರಿನ ಮಹಾನಾಯಕ ಮಾಧ್ಯಮದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡಿಸುತ್ತ ಬಂದಿದ್ದಾನೆ. ಒಂದು ಕಾರ್ಯಕ್ರಮದಲ್ಲಿ ನಾನು ಸಾಂದರ್ಭಿಕವಾಗಿ ಮಾತನಾಡಿದ್ದನ್ನು ಬೇರೆ ಬೇರೆ ರೀತಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೇಲೆ ಹರಿಹಾಯ್ದರು. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದಿದ್ದೆ. ಆದರೆ, ಮಹಾನಾಯಕನ ಮಟ್ಟ ಹಾಕುವ ಸಲುವಾಗಿಯೇ 2023ರ ವಿಧಾನಸಭೆ ಚುನಾವಣೆಗೆ ಮಾತ್ರ ಸ್ಪರ್ಧೆ ಮಾಡಲಿದ್ದೇನೆ. ಅವನನ್ನು ಮೂಲೆಗೆ ಕೂಡಿಸುವ ಸಲುವಾಗಿಯೇ ಸ್ಪರ್ಧಿಸುತ್ತಿದ್ದೇನೆ. ಅವನನ್ನು ಪೂರ್ಣ ಪ್ರಮಾಣದಲ್ಲಿ ಮನೆಗೆ ಹಚ್ಚುವ ತನಕ ರಾಜಕೀಯದಿಂದ ನಿವೃತ್ತಿಯಾಗಲಾರೆ ಎಂದು ಶಾಸಕ ರಮೇಶ ಸವಾಲು ಎಸೆದರು.