ಜಿಲ್ಲೆ

ಜಿಲ್ಲೆಯಲ್ಲಿ 10 ಸಾವಿರ ಗಡಿದಾಟಿದ ಕರೊನಾ ; ಬೆಂಗಳೂರಿಗಿಂತ ಮೂರುಪಟ್ಟು ಸೋಂಕು ; ಮುಂದುವರಿದ ಬೆಡ್ ಪ್ರಾಬ್ಲಮ್

ತುಮಕೂರು :ಕರ್ಪ್ಯೂನಡುವೆಯೂ ಜಿಲ್ಲೆಯಲ್ಲಿ ಕರೊನಾ ಮಹಾಸ್ಫೋಟ ಮುಂದುವರಿದಿದೆ, ಬುಧವಾರ ಕೂಡ ಬರೋಬ್ಬರಿ 1308 ಜನರಿಗೆ ಸೋಂಕು ದೃಢವಾಗಿದ್ದು, ಮುಂದಿನ ಒಂದೆರಡು ವಾರ ಸೋಂಕಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10794ಕ್ಕೇರಿದ್ದು ವಿವಿಧ ಆಸ್ಪತ್ರೆಗಳ ತುರ್ತು ನಿಗಾ ಘಟಕದಲ್ಲಿ 92 ಜನರಿಗೆ ಚಿಕಿತ್ಸೆ ಮುಂದುವರಿದಿರುವ ನಡುವೆಯೇ ಮಹಾಮಾರಿ ಕರೊನಾ 6 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಂಕಿ, ಅಂಶದಲ್ಲಿ ತಿಳಿಸಲಾಗಿದೆ. ಆದರೆ, ಜಿಲ್ಲೆಯಲ್ಲೆಡೆ ಸ್ಮಶಾನದಲ್ಲಿ ಸರತಿಯಲ್ಲಿ ನಿಂತಿರುವ ಆಂಬುಲೆನ್ಸ್‌ಗಳು ಬೇರೆಯೇ ಕಥೆ ಹೇಳುತ್ತಿವೆ.

ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 465 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ 30547 ಜನರು ಸೋಂಕಿನ ವಿರುದ್ಧ ಗೆದ್ದಿದ್ದಾರೆ. ಗುಬ್ಬಿ ಮಹಾಲಕ್ಷ್ಮೀನಗರದ 41 ವರ್ಷದ ಮಹಿಳೆ, ಮಧುಗಿರಿ ತಾಲೂಕು ಕತ್ತಿರಾಜನಹಳ್ಳಿಯ 41 ವರ್ಷದ ಮಹಿಳೆ, ತುಮಕೂರಿನ ಎಸ್‌ಎಸ್ ಪುರಂ 60 ವರ್ಷದ ಮಹಿಳೆ, ಸರಸ್ವತಿಪುರಂ 60 ವರ್ಷದ ಪುರುಷ, ಶಿರಾಗೇಟ್‌ನ 46 ವರ್ಷದ ವ್ಯಕ್ತಿ ಹಾಗೂ ಕೊತ್ತಿಹಳ್ಳಿಯ 47 ವರ್ಷದ ಪುರುಷ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬುಧವಾರ ಸೋಂಕಿತರಾದವರ ಪೈಕಿ 735 ಪುರುಷರು, 573 ಮಹಿಳೆಯರಿದ್ದಾರೆ. ಈ ಪೈಕಿ ಐದು ವರ್ಷದೊಳಗಿನ 10 ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 201 ಹಿರಿಯರಿಗೂ ಮಹಾಮಾರಿ ವಕ್ಕರಿಸಿದ್ದು, ಇವರ ಸಂಪರ್ಕಿತರಾಗಿರುವ ಸಾವಿರಾರು ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಬೆಂಗಳೂರಿಗಿಂತ ದುಪ್ಪಟ್ಟು: ತುಮಕೂರು ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ಬೆಂಗಳೂರು ಸಂಖ್ಯೆಯ ಮೂರುಪಟ್ಟು ಜಾಸ್ತಿಯಾಗಿದೆ. 1.50 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಪ್ರತಿದಿನ 15 ಸಾವಿರದ ಆಸುಪಾಸಿನಲ್ಲಿ ಪ್ರಕರಣ ದಾಖಲಾಗುತ್ತಿದ್ದರೆ, ಕೇವಲ 27 ಲಕ್ಷ ಜನಸಂಖ್ಯೆ ಹೊಂದಿರುವ ತುಮಕೂರಿನಲ್ಲಿ 1500ರ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.

19 ವರ್ಷದ ಯುವತಿ ಬಲಿ? : ಕರೊನಾಗೆ ತಾಯಿ ಬಲಿಯಾದ ಸುದ್ದಿ ಕೇಳಿದ 18 ವರ್ಷದ ಮಗಳೂ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ, ಕರೊನಾದಿಂದ ಬಳಲುತಿದ್ದ 45 ವರ್ಷದ ಮಹಿಳೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಿಸದೇ ಬುಧವಾರ ಮೃತಪಟ್ಟಿದ್ದರು. ಬೆಳಗ್ಗೆ ತಾಯಿ ನಿಧನದ ಸುದ್ದಿ ತಿಳಿದ ಮಗಳಿಗೆ ಮಧ್ಯಾಹ್ನ ಹೃದಯ ನೋವು ಕಾಣಿಸಿಕೊಂಡಿದೆ, ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮನೆಯ ಸದಸ್ಯರಿಗೆ ಸೋಂಕು ದೃಢವಾಗಿದ್ದ ಹಿನ್ನೆಲೆಯಲ್ಲಿ ಯುವತಿ ಮಾನಸಿಕವಾಗಿ ಆಘಾತಗೊಂಡಿದ್ದರು ಎನ್ನಲಾಗಿದೆ.

ಕರೊನಾ ಸೋಂಕಿತರಿಗೆ ಯಶಸ್ವಿ ಹೆರಿಗೆ : ಕರೊನಾ ಸೋಂಕು ತಗುಲಿದ್ದ ಮೂವರು ಗರ್ಭಿಣಿಯರಿಗೆ ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಮಂಗಳವಾರ ಯಶಸ್ವಿ ಹೆರಿಗೆ ಮಾಡಿಸಲಾಗಿದ್ದು, ಸೋಂಕು ತಗುಲಿದ ಗರ್ಭಿಣಿಯರಿಗೆ ಧೈರ್ಯ ಬಂದಿದೆ. ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ನೆ ಡಾ.ಶೈಲಜಾ ಕೂಡಲೇ ಸಿಝೇರಿಯನ್ ಮೂಲಕ ಹೆರಿಗೆ ವಾಡಿಸಿದ್ದು ಮೂವರೂ ತಾಯಿ ಹಾಗೂ ಮಕ್ಕಳು ಆರೋಗ್ಯದಿಂದ್ದಾರೆ.

ಪ್ರತ್ಯೇಕ ಕೋವಿಡ್ ಒಟಿ : ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಇದ್ದರೂ ಕೂಡ ಪ್ರತ್ಯೇಕವಾಗಿ ಕೋವಿಡ್ ಸೋಂಕಿತರಿಗಾಗಿಯೇ ಆಪರೇಷನ್ ಥಿಯೇಟರ್ ಇಲ್ಲದ ಕೊರತೆ ಸಿದ್ಧಗಂಗಾ ಆಸ್ಪತ್ರೆ ನೀಗಿಸಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಆಗಮಿಸುವ ಸೋಂಕಿತರ ಹೃದಯಾಘಾತ, ರಸ್ತೆಅಪಘಾತ ಹಾಗೂ ಗರ್ಭೀಣಿಯರ ಚಿಕಿತ್ಸೆಗಾಗಿ ಕೋವಿಡ್ ಓಟಿ ಪುನಃ ಆರಂಭಿಸಿದ್ದು ತುರ್ತು ಅಗತ್ಯ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೆರಿಗೆ ವಾಡಿಸಿದ್ದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.