ಚಿತ್ರದುರ್ಗ: ನಗರ, ಪಟ್ಟಣ, ಗ್ರಾಮೀಣ ಭಾಗ ಒಳಗೊಂಡು ಜಿಲ್ಲಾದ್ಯಂತ ಹಿಂದು-ಮುಸ್ಲಿಮರು ಒಗ್ಗೂಡಿ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯ ಜೊತೆ ವಿಶೇಷವಾಗಿ ಬುಧವಾರ ಆಚರಿಸಿದರು.
ಜಿಲ್ಲೆಯ ಹಲವೆಡೆ ಈಗಲೂ ಪೀರಲ ಹಬ್ಬವೆಂದೇ ಇದನ್ನು ಕರೆಯುವುದು ಚಾಲ್ತಿಯಲ್ಲಿದೆ. ಎರಡೂ ಧರ್ಮೀಯರು ಜತೆಗೂಡಿ ಸಾಮರಸ್ಯ ಗಟ್ಟಿಗೊಳಿಸುವ ಮೊಹರಂ ಭಾವೈಕ್ಯ ಸಂದೇಶ ಸಾರುವ ವಿಶಿಷ್ಟ ಆಚರಣೆಗಳಲ್ಲಿ ಒಂದಾಗಿದ್ದು, ಮೇಲು-ಕೀಳೆಂಬ ಭೇದವಿಲ್ಲದೆ ಹಲವರು ಪಾಲ್ಗೊಳ್ಳುವುದೇ ಇದರ ವಿಶೇಷ.
ಸಂಪ್ರದಾಯದಂತೆ 10 ದಿನ ನಡೆದ ಈ ಹಬ್ಬದಲ್ಲಿ ಕೊನೆಯ ದಿನವಾದ ಬುಧವಾರ ಕೆಂಡ ಹಾಯಬೇಕಿತ್ತು. ಅದರಂತೆ ವಿವಿಧೆಡೆ ನಡೆದರೂ ಜಿಲ್ಲೆಯ ಕೆಲ ಗ್ರಾಮೀಣ ಭಾಗಗಳಲ್ಲಿ ಗುರುವಾರ ನಡೆಯುವ ಸಾಧ್ಯತೆ ಇದೆ.
ಮೆರವಣಿಗೆ: ಹಬ್ಬದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಬಡಮಕಾನ್, ಬಸವೇಶ್ವರ ಚಿತ್ರಮಂದಿರ, ದೊಡ್ಡಪೇಟೆ, ಚಿಕ್ಕಪೇಟೆ, ಗಾಂಧಿ ವೃತ್ತ, ಆನೆಬಾಗಿಲು ಸೇರಿ ಹಲವೆಡೆ ಸಂಚರಿಸಿತು.
ಮಸೀದಿ, ದರ್ಗಾ, ಅಶುಖಾನಗಳಲ್ಲಿ ಪ್ರತಿಷ್ಠಾಪಿಸುವ ಆಲಂ, ಪಂಜಾ ಮತ್ತು ತಾಜಿಯಾದೊಂದಿಗೆ ಆಚರಿಸಲಾಯಿತು.
ತಾಲೂಕಿನ ಹಲವೆಡೆ ಮೊಹರಂ ಆಚರಣೆಯಲ್ಲಿ ಸಂಪ್ರದಾಯದಂತೆ 5 ದಿನ ಪೀರಲ ದೇವರನ್ನು (ಹೊನ್ನೂರು ಸ್ವಾಮಿ) ಕೂರಿಸುವ ಪರಂಪರೆಯೂ ಇದ್ದು, ಈ ವೇಳೆ ಬೆಲ್ಲ ಹಾಗೂ ಸಕ್ಕರೆಯನ್ನು ದೇಗುಲಕ್ಕೆ ತಂದು ಭಕ್ತರು ಹರಕೆ ತೀರಿಸಲು ಮುಂದಾದ ದೃಶ್ಯ ಕಂಡುಬಂದಿತು.