ಜಿಲ್ಲೆ

ಜಿಲ್ಲೆಯ ಸೇವಾನುಭವ ಸದಾ ಸ್ಮರಣೀಯ

Dharwad

ಧಾರವಾಡ: ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಸಲ್ಲಿಸಿದ ಸೇವಾನುಭವ ಅನನ್ಯವಾದುದು. ಕೆಲಸದಲ್ಲಿ ಶ್ರದ್ಧೆಯಿದ್ದರೆ ಮಾತ್ರ ಸಂತೃಪ್ತಿ ಸಿಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಧಾರವಾಡ ಎಲ್ಲ ಸಂದರ್ಭದಲ್ಲೂ ಉತ್ತಮ ಸಾಧನೆ ಮಾಡಿದೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ನಗರದ ಕೃಷಿ ವಿಶ್ವ ವಿದ್ಯಾಲಯದ ಭವನದಲ್ಲಿ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ನೌಕರರ ಸಂಘಟನೆಗಳು ಜಂಟಿಯಾಗಿ ಮಂಗಳವಾರ ಸಂಜೆ ಆಯೋಜಿಸಿದ್ದ ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಬೀಳ್ಕೊಡುಗೆ, ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಾಗ ಜಿಲ್ಲೆಯು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕೋರ್ಟ್ ಕಟ್ಟಡ ಉದ್ಘಾಟನೆ ಸೇರಿ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ನನ್ನ ವೃತ್ತಿ ಅನುಭವದ ವಿಸ್ತಾರವಾಗಿದೆ. ಜಿಲ್ಲಾಡಳಿತದ ಜವಾಬ್ದಾರಿ ಬಹಳಷ್ಟಿದ್ದು, ಜಿಲ್ಲಾಧಿಕಾರಿಗೆ ಎಲ್ಲ ಅಧಿಕಾರಿಗಳು ಸಹಕಾರ ನೀಡುವುದರಿಂದ ಜನರ ಬೇಡಿಕೆ ಈಡೇರಿಸಲು, ಅಭಿವೃದ್ಧಿ ಸಾಧಿಸಲು ಸಹಾಯವಾಗುತ್ತದೆ. ಹೀಗಾಗಿ ಎಲ್ಲ ಇಲಾಖೆಗಳ ಎಲ್ಲ ಹಂತದ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಮತ್ತು ಜಿಲ್ಲಾಡಳಿತಕ್ಕೆ ನೆರವಾಗಬೇಕು ಎಂದರು.

ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆ ಅಭಿವೃದ್ಧಿಗೆ ಆದ್ಯತೆ ನೀಡಿ, ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಿರ್ಗಮಿತ ಜಿಲ್ಲಾಧಿಕಾರಿ ಜಿಲ್ಲೆಯ ಪ್ರಗತಿಗೆ ಅನೇಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ

ತಂದಿದ್ದಾರೆ. ವಿವಿಧ ಸರ್ಕಾರಿ ಕಾರ್ಯಕ್ರಮಗಳನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಸಾಧನೆ ಮಾಡಿದ್ದಾರೆ. ಇದೇ ರೀತಿ ಜಿಲ್ಲೆಯ ಅಭಿವೃದ್ಧಿ ಸಾಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ ಮಾತನಾಡಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಜಿಪಂ ಸಿಇಒ ಡಾ.ಬಿ.ಸಿ. ಸತೀಶ್, ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಕಿಮ್್ಸ

ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಉಪ ಪೊಲೀಸ್ ಆಯುಕ್ತ ಆರ್.ಬಿ. ಬಸರಗಿ, ಡಿವೈಎಸ್ಪಿ ರವಿ ನಾಯ್್ಕ ಎಸಿಪಿಗಳಾದ ಎಸ್.ಎಂ. ಸಂದಿಗವಾಡ, ಅನುಷಾ ಜಿ., ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ., ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ರಾಮಚಂದ್ರ ಕೆ.ಎಂ., ತಹಸೀಲ್ದಾರರು, ಇತರರು ಇದ್ದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿದರು. ಉಪವಿಭಾಗಾಧಿಕಾರಿ ಮಹ್ಮದ ಜುಬೇರ ವಂದಿಸಿದರು.

ನನ್ನ ಪತಿ ರಾಜೇಂದ್ರ ಚೋಳನ್ ಅವರು ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡಿದರೆ ಅನುಭವ ಹೆಚ್ಚುತ್ತದೆ ಎಂದು ಸಲಹೆ ನೀಡಿದ್ದರು. ನಂತರ ಬೆಳಗಾವಿ ಜಿಪಂ ಸಿಇಒ, ಬಿಆರ್​ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ನಾನು ಈ ಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರಿಂದ ನನ್ನ ಇಬ್ಬರು ಮಕ್ಕಳು ಧಾರವಾಡ ಭಾಷೆಯಲ್ಲಿ ಮಾತನಾಡುವುದನ್ನು ಕಲಿತಿದ್ದಾರೆ. ಅವರ ಮಾತು ಕೇಳುವುದೇ ಖುಷಿ. ಈ ಸಂಭ್ರಮವನ್ನು ತಾಯಿಯೊಂದಿಗೆ ಸಹ ಹಂಚಿಕೊಂಡಿದ್ದೇನೆ. | ದೀಪಾ ಚೋಳನ್, ನಿರ್ಗಮಿತ ಜಿಲ್ಲಾಧಿಕಾರಿ