ಜಿಲ್ಲೆ

ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸಂಸದರ ಯತ್ನ

ಗೋಣಿಕೊಪ್ಪ: ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಮತ್ತು ರಾಜ್ಯ ಸಚಿವರನ್ನು ಸಂಪರ್ಕಿಸಿ ಸೂಕ್ತ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಮಂಡಲ ವಕ್ತಾರ ಚೆಪ್ಪುಡೀರ ರಾಕೇಶ್ ದೇವಯ್ಯ ತಿಳಿಸಿದ್ದಾರೆ.

ಚುನಾವಣೆ ಕಳೆದು ಐದು ತಿಂಗಳ ಅವಧಿಯಲ್ಲಿ ಕೊಡಗು ಕ್ಷೇತ್ರಾದ್ಯಂತ ಪ್ರವಾಸ ಕೈಗೊಂಡ ಸಂಸದರು ಇಲ್ಲಿನ ಬೆಳೆಗಾರರ ಸಮಸ್ಯೆ, ಆನೆ ಮಾನವ ಸಂಘರ್ಷ, ವನ್ಯ ಪ್ರಾಣಿಗಳ ಉಪಟಳಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ. ಬೂತ್ ಮಟ್ಟಗಳಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸ್ನೇಹ ಸಮ್ಮಿಲನ ನಡೆಸಿ ಇಲ್ಲಿನ ಸಮಸ್ಯೆಗಳನ್ನ ಆಲಿಸಿದ್ದಾರೆ. ಗ್ರಾಮೀಣ ಭಾಗದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸುವ ವಿಶೇಷ ಕಾಳಜಿ ಹೊಂದಿದ್ದಾರೆ. ಬಡವರು, ದಲಿತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೊಡಗಿನ ವೀರಾಜಪೇಟೆ ಮತ್ತು ಮಡಿಕೇರಿ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಈ ಬಗ್ಗೆ ಕ್ಷೇತ್ರದ ಜನತೆಗೆ ಮತ್ತು ಕಾರ್ಯಕರ್ತರಿಗೆ ಯಾವುದೇ ಸಂದೇಹ ಬೇಡ. ರಾಜಕೀಯವಾಗಿ ಕಾಲೆಳೆಯುವ ತಂತ್ರಗಾರಿಕೆಯ ಮುಂದುವರಿದ ಭಾಗವಾಗಿ ಸಂಸದರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ದುರುದ್ದೇಶದ ಸಂದೇಶಗಳನ್ನು ಹರಿಯಬಿಡುವ ಮೂಲಕ ಸಂಸದರ ವಿರುದ್ಧ ಜನರಲ್ಲಿ ಭಿನ್ನಾಭಿಪ್ರಾಯ ಮೂಡಿಸಲು ಪ್ರಯತ್ನಿಸಿದ್ದಾರೆ. ಈ ವಿಚಾರಗಳು ಸತ್ಯಕ್ಕೆ ದೂರ ಎಂದರು.

ಬಿಜೆಪಿ ಸೋಲಿನ ಹೊಡೆತದಿಂದ ಚೇತರಿಸಿಕೊಂಡಿಲ್ಲ ಎಂಬ ಆರೋಪಗಳನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಯಾವುದೇ ತಿರುಳಿಲ್ಲ. ಬಿಜೆಪಿ ತನ್ನ ಕ್ಷೇತ್ರದಲ್ಲಿ ಅಸ್ಮಿತೆ ಉಳಿಸಿಕೊಂಡಿದೆ. ವಿಧಾನಸಭೆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಹೆಚ್ಚು ಮತಗಳನ್ನು ನೀಡುವ ಮೂಲಕ ಬಿಜೆಪಿ ಸಂಸದರಿಗೆ ಜನರು ಬೆಂಬಲ ನೀಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯತೆ ಮೆರೆದಿದೆ ಎಂದರು.