ಬಾಗಲಕೋಟೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅಬಕಾರಿ ಇಲಾಖೆ ಸಿಬ್ಬಂದಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. 
ಜಿಲ್ಲೆ

ಜಿಲ್ಲೆಯ ವಿವಿಧೆಡೆ ದಾಳಿ ಹಣ, ಮದ್ಯ ಜಪ್ತಿ

ಬಾಗಲಕೋಟೆ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಭಾನುವಾರ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಹಾಗೂ ಬೇರೆ ಕಡೆಗೆ ಅಬಕಾರಿ ದಾಳಿಯಿಂದಾಗಿ ದಾಖಲೆ ಇಲ್ಲದೇ ತೆಗೆದುಕೊಂಡು ಹೋಗುತ್ತಿದ್ದ ನಗದು ಹಣ ಹಾಗೂ ಮದ್ಯವನ್ನು ಜಪ್ತಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೇ ಹಣ ತೆಗೆದಕೊಂಡು ಹೋಗಿದ್ದ ವೇಳೆ ಚೆಕ್ ಪೋಸ್ಟ್ ಗಳಲ್ಲಿ ಒಟ್ಟು ೧.೮೫ ಲಕ್ಷ ರೂ.ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಜಮಖಂಡಿ ವಿಧಾನಸಭೆ ಕ್ಷೇತ್ರದ ಹುಲ್ಯಾಳ ಚೆಕ್ ಪೋಸ್ಟ್ ನಲ್ಲಿ ೫೫ ಸಾವಿರ ರೂ. ಹಾಗೂ ಹುನ್ನೂರ ಚೆಕ್ ಪೋಸ್ಟ್ ನಲ್ಲಿ ೧.೩೦ ಲಕ್ಷ ರೂ.ಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಽಕಾರಿ ಸಂತೋಷ ಕಾಮಗೌಡ ಮಾಹಿತಿ ನೀಡಿದ್ದಾರೆ.

ಇನ್ನು ಬಾಗಲಕೋಟೆ ತಾಲೂಕಿನ ಎರಡು ಕಡೆ ದಾಳಿ ನಡೆಸಿರುವ ಅಬಕಾರಿ ಅಽಕಾರಿಗಳು ಒಟ್ಟು ೧.೧೩ ಲಕ್ಷ ರೂ. ಮೌಲ್ಯದ ೨೫.೯೨ ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ನಗರದ ಬಸ್ ನಿಲ್ದಾಣದ ಹಿಂದೆ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ೮.೬೪ ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಹಾಗೆಯೇ ಕಲಾದಗಿ ಗ್ರಾಮದ ಕಾಲೇಜ್ ಹತ್ತಿರ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ೧೭.೨೮ ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಅಂಬರೀಶ್ ಬಿಚ್ಚಲಿ ಹಾಗೂ ಲಚ್ಚಪ್ಪ ಚವ್ಹಾಣ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಭಾನುವಾರ ಬೆಳಗ್ಗೆಯೇ ಜಿಲ್ಲಾ ಮುಖ್ಯ ಚುನಾವಣಾಽಕಾರಿ ಕೆ.ಎಂ.ಜಾನಕಿ ಅವರು ವಿವಿಧ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನ ತಪಾಸಣೆ ಹಾಗೂ ಹೆಚ್ಚಿನ ನಿಗಾ ವಹಿಸುವಂತೆ ಚೆಕ್ ಪೋಸ್ಟ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನ ಚೆಕ್ ಪೋಸ್ಟ್ ಹಾಗೂ ಲಕ್ಷಾನಟ್ಟಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿದ್ದರು.