ಚಾಮರಾಜನಗರ: ಜಿಲ್ಲೆಯ ಪ್ರವಾಸಿ ತಾಣ ಭರಚುಕ್ಕಿ ಹಾಗೂ ಇನ್ನಿತರ ಸ್ಥಳಗಳಿಗೆ ಶನಿವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭೇಟಿ ನೀಡಿ ಪರಿಶೀಲಿಸಿದರು.
ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ಭರಚುಕ್ಕಿ ಹಾಗೂ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಪ್ರವಾಸಿಗರಿಗೆ ಒದಗಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಪ್ರವಾಸಿಗರು ವಹಿಸಬೇಕಿರುವ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.
ಯಳಂದೂರು ತಾಲೂಕಿನ ವಡಗೆರೆಯಲ್ಲಿರುವ ಅಗರ-ಮಾಂಬಳ್ಳಿ ಹೋಬಳಿಗೆ ಸೇರಿದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಕೊಠಡಿಗಳು, ಸಭಾಂಗಣ ಇತರ ಸ್ಥಳಗಳನ್ನು ವೀಕ್ಷಿಸಿದರು. ವಿದ್ಯಾರ್ಥಿನಿಯರಿಗೆ ವಸತಿ ಶಾಲೆಯಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ, ಗುಣಮಟ್ಟದ ಊಟ-ಉಪಾಹಾರ ನೀಡಲಾಗುತ್ತಿದೆಯೇ? ಕೊಠಡಿಗಳು, ಶೌಚಗೃಹ ಮತ್ತಿತರ ಕಡೆ ಶುಚಿತ್ವ ಕಾಪಾಡಿಕೊಳ್ಳಲಾಗುತ್ತಿದೆಯೇ? ಶೈಕ್ಷಣಿಕ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆಯೇ ? ಎಂದು ಪ್ರಶ್ನಿಸಿ ತಿಳಿದುಕೊಂಡರು.
ವಿದ್ಯಾರ್ಥಿನಿಯರು ಶ್ರಮಪಟ್ಟು ಓದಬೇಕು. ಹೆಚ್ಚು ಅಂಕ ಗಳಿಸಿ ನಿಮಗೆ ಆಸಕ್ತಿ ಇರುವ ವಿಷಯಗಳನ್ನು ಕಾಲೇಜು ಹಂತದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಂಡರೆ ಮುಂದಿನ ಭವಿಷ್ಯ ಉತ್ತಮವಾಗಲಿದೆ ಎಂದು ಸಲಹೆ ನೀಡಿದರು.
ಬಳಿಕ ಯಳಂದೂರು ತಾಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮಕ್ಕೆ ಭೇಟಿ ನೀಡಿದ ಡಿಸಿ, ಅಂಧತ್ವ ಪ್ರಮಾಣ ತಗ್ಗಿಸಲು ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ನಡೆಸಲಾಗುತ್ತಿರುವ ನೇತ್ರ ತಪಾಸಣೆ ಆಂದೋಲನ ಕಾರ್ಯವನ್ನು ವೀಕ್ಷಿಸಿದರು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಜತೆ ಗ್ರಾಮದಲ್ಲಿ ಸಂಚರಿಸಿ, ಎಲ್ಲರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನ ತೊಂದರೆಗಳನ್ನು ಪರಿಹರಿಸಲು ವಿಶೇಷವಾಗಿ ನಡೆಸುತ್ತಿರುವ ಆಶಾಕಿರಣ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.