ಹಾಸನ: ಜಿಲ್ಲೆಯ ವಿವಿಧೆಡೆ ನಡೆದ ಕಳವು ಪ್ರಕರಣಗಳಲ್ಲಿ ಕಾಫಿ ಹೊಟ್ಟು, ಲಾರಿ, ಕುರಿ, ನಗ-ನಾಣ್ಯ ಕಳವು ಮಾಡಲಾಗಿದೆ.
ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಬಳಿ 1,18,347 ರೂ. ಮೌಲ್ಯದ ಕಾಫಿ ಹೊಟ್ಟು ಸಮೇತ 6 ಲಕ್ಷ ಮೌಲ್ಯದ ಲಾರಿ ಕಳವು ಮಾಡಲಾಗಿದೆ.ಚಿಕ್ಕಮಗಳೂರು ಜಿಲ್ಲೆ ಕೆ.ಹೊಸಳ್ಳಿಯ ರಂಗನಾಥ ಎಂಬುವರ ಲಾರಿಗೆ ಚಾಲಕರಾಗಿ ರಮೇಶ, ಕೃಷ್ಣ ಕ್ಲೀನರ್ ಅವರು ಸೆ.19 ರಂದು ಕೊಡಗು ಜಿಲ್ಲೆ ಕುಶಾಲನಗರದ ಹಂಶಿಕ ಟ್ರೇಡರ್ಸ್‌ನಿಂದ ಕಾಫಿ ಹೊಟ್ಟು ತುಂಬಿಕೊಂಡು ಗುಬ್ಬಿಯ ಕೆಎಂಎಫ್ ಫ್ಯಾಕ್ಟರಿಗೆ ಕೊಂಡೊಯ್ಯುತ್ತಿದ್ದಾಗ ಹಿರೀಸಾವೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಲಾರಿ ನಿಲ್ಲಿಸಿ, ಹೋಟೆಲ್‌ಗೆ ಹೋಗಿ ಟೀ ಕುಡಿದು ಬರುವ ವೇಳೆ ಲಾರಿ ಇರಲಿಲ್ಲ. ಈ ಸಂಬಂಧ ಹಿರೀಸಾವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ಸಕಲೇಶಪುರದ ಅಗ್ರಹಾರ ಬಾಳೆಗದ್ದೆಯ ಆಸಿಫ್ ಹುಸೇನ್ ಎಂಬುವರು ಕೊಟ್ಟಿಗೆಯಲ್ಲಿ ಕಟ್ಟಿದ್ದ 96 ಸಾವಿರ ಬೆಲೆ ಬಾಳುವ 13 ಕುರಿಗಳನ್ನು ಸೆ.19 ರ ರಾತ್ರಿ ಕಳವು ಮಾಡಲಾಗಿದೆ.ತೇಜಸ್ವಿ ಥಿಯೇಟರ್ ಸರ್ಕಲ್‌ನಲ್ಲಿ ಬನ್ನೂರು ಮಟನ್‌ಸ್ಟಾಲ್ ನಡೆಸುತ್ತಿರುವ ಆಸಿಫ್, ಅದಕ್ಕಾಗಿ 13 ಕುರಿ ತಂದಿದ್ದರು. ಮಳಲಿ ಗ್ರಾಮಕ್ಕೆ ಹೋಗುವ ಗದ್ದೆ ರಮೇಶ ಅವರ ಮಾಲೀಕತ್ವದ ಬಾಡಿಗೆ ಜಾಗದಲ್ಲಿರುವ ಕೊಟ್ಟಿಗೆಯಲ್ಲಿ 13 ಕುರಿಗಳನ್ನು ಕಟ್ಟಿಹಾಕಿ ಬೀಗ ಹಾಕಿದ್ದರು. ಶುಕ್ರವಾರ ಬೆಳಗ್ಗೆ ಬಂದು ನೋಡಿದಾಗ ಅಷ್ಟೂ ಕುರಿಗಳನ್ನು ಕಳ್ಳರು ಹೊತ್ತೊಯ್ದಿದ್ದು, ಈ ಸಂಬಂಧ ನಗರಠಾಣೆಗೆ ದೂರು ನೀಡಲಾಗಿದೆ.
ಇನ್ನೂಂದು ಪ್ರಕರಂದಲ್ಲಿ ಅರಕಲಗೂಡು ತಾಲೂಕು ಚಿಕ್ಕಗಾವನಹಳ್ಳಿಯ ಮನೆಯೊಂದರ ಬಾಗಿಲು ಹಾಗೂ ಬೀರುವಿನ ಬಾಗಿಲು ಒಡೆದು 88,200 ರೂ. ನಗರದು ಹಾಗೂ 140 ಗ್ರಾಂ ತೂಕದ 5 ಲಕ್ಷ ಬೆಲೆಬಾಳುವ ಚಿನ್ನಾಭರಣ ಕಳವು ಮಾಡಲಾಗಿದೆ.
ಗ್ರಾಮದ ವಸಂತ ಸೆ.19 ರಂದು ಸಂಜೆ ಮನೆ ಬಾಗಿಲಿಗೆ ಬೀಗ ಹಾಕಿ ಸಂಸಾರ ಸಮೇತ ಕಬ್ಬಳಿಗೆರೆ ಗ್ರಾಮಕ್ಕೆ ಹೋಗಿ ಮರುದಿನ ಬೆಳಗ್ಗೆ ವಾಪಸ್ ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಈ ಸಂಬಂಧ ಅರಕಲಗೂಡು ಪೊಲೀಸರಿಗೆ ದೂರು ನೀಡಲಾಗಿದೆ.