ಚಾಮರಾಜನಗರ: ಸುಮಾರು ಎರಡು ತಿಂಗಳಿಂದ ಬೇಸಿಗೆಯ ಬಿಸಿಲಿಗೆ ಬಸವಳಿದಿದ್ದ ಜನರಿಗೆ, ಬುಧವಾರ ಸುರಿದ ವರ್ಷದ ಮೊದಲ ಮಳೆ ತಂಪೆರೆಯಿತು.
ಜಿಲ್ಲೆಯ ಚಾಮರಾಜನಗರ, ಯಳಂದೂರು ಹಾಗೂ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಸಂಜೆಯ ವೇಳೆಯಲ್ಲಿ ಕೆಲಕಾಲ ಮಳೆ ಸುರಿಯುವ ಮೂಲಕ ಇಳೆಯ ವಾತಾವರಣವನ್ನು ತಂಪಾಗಿಸಿತು. ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆಯ ವೇಳೆಗೆ ಹಲವು ಕಡೆಗಳಲ್ಲಿ ಮಳೆಯಾಗುವ ಮೂಲಕ ಬಿರುಬಿಸಿಲಿಗೆ ಒಣಗಿದ್ದ ಮರ-ಗಿಡಗಳಿಗೆ ಜೀವ ಕಳೆ ಬಂದಂತಾಯಿತು.
ಚಾಮರಾಜನಗರ ತಾಲೂಕಿನ ಚಂದಕವಾಡಿ, ನಾಗವಳ್ಳಿ, ಹರದನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕೆಲವೆಡೆ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿಯಿತು. ಕಾಡಂಚಿನಲ್ಲಿ ದಡ್ಡವಾದ ಮೋಡದೊಂದಿಗೆ ಮಳೆಯಾಯಿತು. ಕೆಲವು ಗ್ರಾಮಗಳಲ್ಲಿ ತುಂತುರು ಮಳೆಯಾಯಿತು. ತಾಲೂಕಿನ ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿರುವ ಕೆ. ದೇವರಹಳ್ಳಿ, ಮುರುಟಿ ಪಾಳ್ಯ ಬೆಲ್ಲವತ್ತ, ಗುಂಬಳ್ಳಿ ಚೆಕ್‌ಪೋಸ್ಟ್, ಪುರಾಣಿಪೋಡು, ಯರಕನಗದ್ದೆ, ಕನ್ನೇರಿ ಕಾಲೋನಿ, ಬಂಗ್ಲೆಪೋಡು, ಬಿಳಿಗಿರಿರಂಗನಾಥಸ್ವಾಮಿ ದೇಗುಲ ಹಾಗೂ ಇನ್ನಿತರೆ ಕಡೆಗಳಲ್ಲಿ ಮಳೆಯಾಯಿತು. ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹಾಗೂ ಇನ್ನಿತರೆ ಕಡೆಗಳಲ್ಲಿ ತುಂತುರು ಮಳೆ ಸುರಿಯಿತು. ಅತಿಯಾದ ಬಿಸಿಲು ಮತ್ತು ಧಗೆಯಿಂದ ಬಸವಳಿದಿದ್ದ ಜನರು ಕೆಲವೆಡೆ ಮಳೆಯಲ್ಲೇ ಮಿಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾಕೇಂದ್ರದಲ್ಲಿ ಜೋರು ಮಳೆ:
ನಗರದಲ್ಲಿ ವರ್ಷದ ಮೊದಲ ಮಳೆ ಸುಮಾರು ಅರ್ಧ ತಾಸು ಜೋರಾಗಿ ಸುರಿಯಿತು. ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ ಹಾಗೂ ಇನ್ನಿತರೆ ಜನನಿಬಿಡ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟುಗಳ ಮುಂಭಾಗ ಜನರು ಮಳೆಯಿಂದ ರಕ್ಷಣೆ ಪಡೆದರು. ಕರಲಕಾಲ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಹಲವಾರು ಪ್ರಮುಖ ಬಡಾವಣೆಗಳಲ್ಲೂ ಮಳೆ ಜೋರಾಗಿ ಸುರಿಯುವ ಮೂಲಕ ನೆಲದ ಬಿಸಿಯನ್ನು ನೀಗಿಸಿತು. ಕೆಲವು ಬಡಾವಣೆಗಳ ಮಣ್ಣಿನ ರಸ್ತೆ ಗುಂಡಿಗಳಲ್ಲಿ ನೀರು ನಿಂತು, ವಾಹನ ಸವಾರರು ಕಿರಿಕಿರಿ ಅನಿಭವಿಸಿದರು. ಬಿಸಿಲಿನ ತಾಪಕ್ಕೆ ಒಣಗಿದ್ದ ಮರ-ಗಿಡಗಳಿಗೆ ಜೀವಕಳೆ ಬಂದಂತಾಯಿತು.