ಜಿಲ್ಲೆ

ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ವ್ಯಾಪಕ ಹಣ ಹಂಚಿಕೆ:ಎಚ್.ಡಿ. ರೇವಣ್ಣ ಗಂಭೀರ ಆರೋಪ

ಹಾಸನ : ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಎರಡು ದಿನ ಬಾಕಿ ಉಳಿದಿದ್ದು, ಹಾಸನ, ಅರಸೀಕೆರೆ, ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ವೋಟುಗಳ ಖರೀದಿ ನಡೆಯುತ್ತಿದೆ. ಮತದಾನ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ವಿಡಿಯೋ ತೆಗೆದುಕೊಂಡು ಬಂದು ನಂತರ ಹಣ ಪಡೆದುಕೊಳ್ಳುವಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗಂಭೀರವಾಗಿ ಆರೋಪಿಸಿದರು.

ಜಿಲ್ಲೆಯ ಈ ಮೂರು ಕ್ಷೇತ್ರಗಳಲ್ಲಿ ಒಂದು ವೋಟಿಗೆ ಮೂರರಿಂದ ಐದು ಸಾವಿರ ಹಣ ನಿಗದಿಪಡಿಸಲಾಗಿದೆ. ಮತದಾರರು ಮತಕಟ್ಟೆಗೆ ಮೊಬೈಲ್ ತೆಗೆದುಕೊಂಡು ಹೋಗಿ ಮತ ಹಾಕುವ ಸಂದರ್ಭದಲ್ಲಿ ಫೋಟೋ ಅಥವಾ ವಿಡಿಯೋ ಮಾಡಿಕೊಂಡು ಬಂದು ತೋರಿಸಿದರೆ ಅವರಿಗೆ ಹಣ ನೀಡಲಾಗುತ್ತಿದೆ. ಆದ್ದರಿಂದ ತಕ್ಷಣವೇ ಜಿಲ್ಲಾ ಚುನಾವಣೆ ಅಧಿಕಾರಿಗಳು ಮತ್ತು ರಾಜ್ಯ ಚುನಾವಣಾಧಿಕಾರಿಗಳು ಜಿಲ್ಲೆಯಾದ್ಯಂತ ಎಲ್ಲಾ ಮತಗಟ್ಟೆ ಕೇಂದ್ರಗಳಿಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನ ನಿಷೇಧಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೆಲವರು ಸೋಲುವ ಭಯದಿಂದ ಈ ತಂತ್ರ ಮಾಡಿದ್ದಾರೆ. ಅಲ್ಲದೆ ಐಡಿ ಕಾಡುಗಳನ್ನು ಪಡೆದುಕೊಂಡು ಚುನಾವಣೆಗೆ ಬರಬೇಡಿ ಎಂದು ಕೂಡ ಹೇಳುತ್ತಿದ್ದಾರೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷ 60 ವರ್ಷ ಆಡಳಿತ ನಡೆಸುವ ಸಂದರ್ಭದಲ್ಲಿ ಜನರಿಗೆ ಯಾವುದೇ ಗ್ಯಾರಂಟಿ ಕೊಡದೆ ಈಗ ಗ್ಯಾರಂಟಿ ಕಾರ್ಡುಗಳನ್ನು ಕೊಡಲು ಮುಂದಾಗಿದೆ. ನಮ್ಮ ಜಿಲ್ಲೆಯ ಇಬ್ಬರು ಶಾಸಕರಿಗೆ ಗ್ಯಾರಂಟಿ ಕಾರ್ಡ್ ಕೊಡ್ತೀನಿ ಎಂದು ಕರೆದುಕೊಂಡು ಹೋಗಿ ಒಬ್ಬರಿಗೆ ಕೊಟ್ಟಿದ್ದಾರೆ. ಇನ್ನೊಬ್ಬರಿಗೆ ಗ್ಯಾರೆಂಟಿನು ಕೊಡಲಿಲ್ಲ ಟಿಕೆಟ್ ಕೊಡಲಿಲ್ಲ ಎಂದು ಮಾಜಿ ಶಾಸಕರಾದ ಕೆ.ಎಂ ಶಿವಲಿಂಗೇಗೌಡ ಮತ್ತು ಎ.ಟಿ. ರಾಮಸ್ವಾಮಿ ಅವರನ್ನು ಲೇವಡಿ ಮಾಡಿದರು.

ರಾಜ್ಯದ ಪ್ರಭಾವಿ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿಯ ಜತೆ ಸಮ್ಮಿಶ್ರ ಸರ್ಕಾರದಲ್ಲಿ ಜೋಡಿತ್ತಿನಂತೆ ನಟಿಸಿ, ನಂತರ ಸರ್ಕಾರ ತೆಗೆದರಲ್ಲದೆ, ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿದ್ದರು. ಸಮ್ಮಿಶ್ರ ಸರ್ಕಾರದ 14 ತಿಂಗಳ ಅವಧಿಯಲ್ಲಿ ಯಾರ್ಯಾರು ಏನೇನು ಕೆಲಸ ಮಾಡಿದ್ದರು ಎಂಬುದು ಎಲ್ಲವೂ ಗೊತ್ತಿದೆ ಕಾಂಗ್ರೆಸ್ ಅಧ್ಯಕ್ಷರು ಕೆಲವರನ್ನು ಬಾಂಬೆಗೆ ಕಳುಹಿಸಿ ನಂತರ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ‘ನಾನು ಮುಖ್ಯಮಂತ್ರಿ ಆಗುತ್ತೇನೆ. ರೇವಣ್ಣನನ್ನು ಉಪಮುಖ್ಯಮಂತ್ರಿ ಮಾಡುವುದಾದರೆ ಅವರನ್ನು ಕರೆದುಕೊಂಡು ಬರುತ್ತೇನೆ,’ ಎಂದು ಹೇಳಿದರು. ಆದರೆ ನಾನು ಕುಮಾರಸ್ವಾಮಿಗೆ ಮೋಸ ಮಾಡುವವನಲ್ಲ ಎಂದು ಹೇಳಿದರು.

ಈಗ ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರವನ್ನು 40% ಪಸೆರ್ಂಟ್ ಸರ್ಕಾರ ಎಂದು ಹೇಳಿಕೊಂಡಿ ತಿರುಗಾಡುತ್ತಿದ್ದಾರೆ. ಆದರೆ ಇದೇ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನವರು ಎಷ್ಟು ಕಮಿಷನ್ ಪಡೆದಿದ್ದರೂ ಎಂಬುದು ಎಲ್ಲವೂ ಗೊತ್ತಿದೆ ಎರಡು ರಾಷ್ಟ್ರೀಯ ಪಕ್ಷಗಳು ಜನರಿಗೆ ಮೋಸ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಧ್ಯಕ್ಷರು ಪಕ್ಷ ಬಿಟ್ಟು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ತೋರಿಸಲಿ. ಆಮೇಲೆ ಅವರೇ ಮುಗಿಯುತ್ತಾರೋ ಅಥವಾ ನಮ್ಮನ್ನು ಮುಗಿಸುತ್ತಾರೋ ನೋಡೋಣ. ಕಾಂಗ್ರೆಸ್‌ನವರಿಗೆ ನೈತಿಕತೆ ಇದ್ದರೆ ನಮ್ಮ ಬಗ್ಗೆ ಮಾತನಾಡಬಾರದು. ಕೋಲಾರದಲ್ಲಿ ನಾವು ನಾಲ್ಕು ಸ್ಥಾನ ಗೆಲ್ಲುವ ಸಾಧ್ಯತೆಗಳಿವೆ. ಆದರೆ ಪ್ರಾದೇಶಿಕ ಪಕ್ಷವನ್ನು ಮುಗಿಸಬೇಕೆಂಬ ಉದ್ದೇಶದಿಂದ ಅಲ್ಲಿ ಯಾವೆಲ್ಲ ತಂತ್ರಗಾರಿಕೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.