ಧಾರವಾಡ: ಅವರು ಎಳೆ ಯುವಕರು. ಉದ್ಯೋಗಕ್ಕಾಗಿ ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧರಿರುವ ಉತ್ಸಾಹಿಗಳು. ಅವಕಾಶ ಸಿಕ್ಕಿದ್ದು ದೇಶದ ರಾಜಧಾನಿಯಲ್ಲಿ. ಬಿಪಿಒ ಕಂಪನಿಯೊಂದರಲ್ಲಿ ನೌಕರಿ. ದೆಹಲಿಯನ್ನು ಕರೊನಾ ವೈರಸ್ ಜಾಸ್ತಿ ಪ್ರಮಾಣದಲ್ಲೇ ಬಾಧಿಸುತ್ತಿದೆ. ಹೀಗಾಗಿ, ಅಲ್ಲಿಂದ ಹೊರಟು ಪ್ರಯಾಸದಿಂದ ಜಿಲ್ಲೆಗೆ ಮರಳಿದ್ದಾರೆ. ದುರ್ದೈವ ಎಂದರೆ, ಹಾಗೆ ಮರಳಿದ ಮೂವರಲ್ಲಿ ಇಬ್ಬರ ಗಂಟಲನ್ನು ಕರೊನಾ ವೈರಸ್ ಆಗಲೇ ಸೇರಿಕೊಂಡು ಬಿಟ್ಟಿದೆ.
ಇವರನ್ನು ಪಿ 1609 ಹಾಗೂ ಪಿ 1610 ಎಂದು ಗುರುತಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಈ ಇಬ್ಬರ ಪ್ರಯಾಣ ವಿವರಗಳನ್ನು ಜಿಲ್ಲಾಡಳಿತ ಪ್ರಕಟಿಸಿದೆ.
ಕುಂದಗೋಳ ತಾಲೂಕು ಗುರುವಿನಹಳ್ಳಿಯ 22 ವರ್ಷದ ಪುರುಷ (ಪಿ 1609 ) ಹಾಗೂ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ 23 ವರ್ಷದ ಯುವಕ (ಪಿ 1610), ಈ ಇಬ್ಬರಲ್ಲಿ ಕರೊನಾ ಕಾಣಿಸಿಕೊಂಡಿದೆ.
ಇವರು ಸೇರಿ ರಾಜ್ಯದ 7 ಜನರು ಐದಾರು ತಿಂಗಳಿಂದ ದೆಹಲಿಯ ಬಿಪಿಒ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ 6 ಜನರು ಮೇ 14ರಂದು ಬೆಳಗ್ಗೆ 10 ಗಂಟೆಗೆ ಸ್ಥಳೀಯ ಕಾರೊಂದನ್ನು ಬಾಡಿಗೆ ಪಡೆದು ಇಂದ್ರಪುರ ಸೆಂಟ್ರಲ್ ದೆಹಲಿಯಿಂದ ಹೊರಟು, ಮಧ್ಯಾಹ್ನ 12.30ಕ್ಕೆ ಫಿರೋಜ್ ಷಾ ಕೋಟ್ಲಾ, ಅಂಬೇಡ್ಕರ್ ಕ್ರಿಕೆಟ್ ಮೈದಾನ ತಲುಪಿದ್ದರು. ಅಲ್ಲಿ ಕೋವಿಡ್-19 ಪರೀಕ್ಷೆಗಾಗಿ ಸಂಜೆ 6.30ರವರೆಗೂ ಕಾಯ್ದು, ನಂತರ ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿದ್ದ ವಾಹನದ ಮೂಲಕ ಸಂಜೆ ಹಳೇ ದೆಹಲಿ ರೈಲ್ವೆ ನಿಲ್ದಾಣ ತಲುಪಿದ್ದರು. ಅಲ್ಲಿ ಇನ್ನೊಬ್ಬ ವ್ಯಕ್ತಿ ಇವರ ಜತೆಗೂಡಿದ್ದ. 7 ಜನರು 10 ರಾತ್ರಿ ಗಂಟೆಗೆ ಸೇವಾ ಶ್ರಮಿಕ ರೈಲಿನಲ್ಲಿ ಹೊರಟಿದ್ದರು.
ಮೇ 17ರಂದು ರಾತ್ರಿ 11.30 ಗಂಟೆಗೆ ಸೇವಾ ಶ್ರಮಿಕ್ ರೈಲು ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣ ತಲುಪಿದ್ದರು. ಧಾರವಾಡ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಬಸ್ ಮೂಲಕ ಮೂವರನ್ನು ಧಾರವಾಡಕ್ಕೆ ಕರೆತರಲಾಗಿತ್ತು. ಇಬ್ಬರನ್ನು ಹಾವೇರಿ ಜಿಲ್ಲೆಗೆ ಹಾಗೂ ಇಬ್ಬರನ್ನು ಬಳ್ಳಾರಿ ಜಿಲ್ಲೆಗೆ ಕಳುಹಿಸಲಾಗಿತ್ತು. ಅದೇ ದಿನ ಧಾರವಾಡ ಜಿಲ್ಲೆಯ ಮೂವರನ್ನು ಗಂಟಲ ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಮೇ 21ರಂದು ಇಬ್ಬರು ಯುವಕರು ಕರೊನಾ ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇವರನ್ನು ಸಂರ್ಪಸಿದ ಸಾರ್ವಜನಿಕರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದೆ. ಕಾರಣ ಅಂಥವರು ಕರೊನಾ ಸಹಾಯವಾಣಿ 1077ಗೆ ಸಂರ್ಪಸಿ ವಿವರ ನೀಡಬೇಕು. ಕೂಡಲೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಈಗಾಗಲೇ 9 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
290 ಶಂಕಿತರು ಪತ್ತೆ: ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 290 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಗುರುವಾರ ಇದ್ದ (ಒಟ್ಟು) 11,745 ನಿಗಾ ವಹಿಸಿದವರ ಸಂಖ್ಯೆ ಶುಕ್ರವಾರ 12,044ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 11376 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 10357 ಜನರ ವರದಿ ನೆಗೆಟಿವ್ ಬಂದಿವೆ. 33 ಪ್ರಕರಣಗಳಲ್ಲಿ ಪಾಸಿಟಿವ್ ಬಂದಿದ್ದು, 9 ಜನ ಗುಣಮುಖರಾಗಿದ್ದಾರೆ. ಇನ್ನೂ 995 ವರದಿ ಬರಬೇಕಿದೆ. ಗುರುವಾರ ಬಾಕಿ ಇದ್ದ 1269 ವರದಿಗಳ ಪೈಕಿ 274 ವರದಿಗಳು ನೆಗೆಟಿವ್ ಬಂದಿವೆ.
ಭಾನುವಾರ ನಿಷೇಧಾಜ್ಞೆ: ಕರೊನಾ ಹರಡುವಿಕೆ ತಡೆಗೆ ಮೇ 24ರಂದು ಸಿಆರ್ಪಿಸಿ ಕಲಂ 144ರ ಅನ್ವಯ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಆದೇಶವು ಮೇ 23ರ ಸಂಜೆ 7ರಿಂದ ಮೇ 25ರ ಬೆಳಗ್ಗೆ 7ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಜಿಲ್ಲಾದ್ಯಂತ ವಾಹನ ಸಂಚಾರ ಸಂಪೂರ್ಣ ನಿಷೇಧವಾಗಿರುತ್ತದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿರಬೇಕು. ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಯಾವುದೇ ವಾಣಿಜ್ಯ ವಹಿವಾಟುಗಳಿಗೆ ಅವಕಾಶವಿಲ್ಲ. ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ ನಿಷೇಧಿಸಲಾಗಿದೆ. 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಸಮಾರಂಭ ಜರುಗಿಸುವಂತಿಲ್ಲ. ಸಾರ್ವಜನಿಕರು ತುರ್ತು ವೈದ್ಯಕೀಯ ಕಾರ್ಯ ಹೊರತುಪಡಿಸಿ ಅನಗತ್ಯ ತಿರುಗಾಡುವುದನ್ನು ನಿರ್ಬಂಧಿಸಿದೆ. ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನ ಭಾಗವಹಿಸಲು ಅವಕಾಶವಿದೆ. ಶವಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ. ಸರ್ಕಾರಿ ವಾಹನಗಳು ಮತ್ತು ಕೋವಿಡ್-19 ಕಾರ್ಯಾಚರಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಮತ್ತು ವಾಹನಗಳಿಗೆ ಆದೇಶ ಅನ್ವಯಿಸುವುದಿಲ್ಲ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗಂಟಲ ದ್ರವ ಸಂಗ್ರಹ ಕೇಂದ್ರ ಹೆಚ್ಚಳಕ್ಕೆ ಸೂಚನೆ: ಬರುವ ದಿನಗಳಲ್ಲಿ ಕೋವಿಡ್ ತಪಾಸಣೆಯ ಪ್ರಮಾಣ ಹೆಚ್ಚಿಸಿ, ಪರೀಕ್ಷೆಗೊಳಪಡಿಸಲು ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೂಗು ಮತ್ತು ಗಂಟಲ ದ್ರವ ಸಂಗ್ರಹಣಾ ಕೇಂದ್ರಗಳನ್ನು ಹೆಚ್ಚಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.
ಧಾರವಾಡದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊರ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಹೊರ ಜಿಲ್ಲೆಗಳಿಂದಲೂ ಮುಕ್ತ ಪ್ರವೇಶ ಅವಕಾಶ ಇದೆ. ಆದ್ದರಿಂದ ಕೆಮ್ಮು, ನೆಗಡಿ, ಜ್ವರ, ತೀವ್ರ ಉಸಿರಾಟದ ತೊಂದರೆಗಳ ಲಕ್ಷಣಗಳಿರುವ ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಬೇಕು. ಸದ್ಯ ಜಿಲ್ಲೆಯಲ್ಲಿ ಮೊಬೈಲ್ ಸ್ವಾ್ಯಬ್ ಸಂಗ್ರಹಣಾ ಕೇಂದ್ರ ಸೇರಿ 11 ಘಟಕಗಳಿವೆ. ಇವುಗಳ ಸಂಖ್ಯೆ ಕನಿಷ್ಠ 20ಕ್ಕೆ ಏರಿಕೆಯಾಗಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ನಗರ ಆರೋಗ್ಯ ಕೇಂದ್ರಗಳು ಮತ್ತು ಗ್ರಾಮೀಣ ಭಾಗದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಗುರುತಿಸಿ, ಅಗತ್ಯ ಉಪಕರಣಗಳನ್ನು ಒದಗಿಸಬೇಕು ಎಂದರು.
ಬೆಂಗಳೂರಿನಲ್ಲೇ ಸುತ್ತಾಡುತ್ತಿರುವ ಸೋಂಕಿತ ಚಾಲಕ: ಪಾಸಿಟಿವ್ ವರದಿ ಬಂದಿರುವ ಬಂಕಾಪುರದ (ಪಿ-1691) ವ್ಯಕ್ತಿ ಬೆಳಗ್ಗೆಯಿಂದ ಸಂಜೆಯವರೆಗೂ ಬೆಂಗಳೂರು ಮಾರುಕಟ್ಟೆಯಲ್ಲಿ ಕಾಲ ಕಳೆದಿದ್ದಾನೆ.
ಪಿ-1691 ವ್ಯಕ್ತಿ ಚಾಲಕನಾಗಿದ್ದು, ಮೇ 5ರಿಂದ 12ರೊಳಗೆ 3 ಬಾರಿ ಮುಂಬೈಗೆ ಮೆಣಸಿನಕಾಯಿ ಲೋಡ್ ತೆಗೆದುಕೊಂಡು ಹೋಗಿ ಬಂದಿದ್ದ. ಇದನ್ನು ಅಧಿಕಾರಿಗಳಿಗೆ ತಿಳಿಸಿದ್ದ. ಹೀಗಾಗಿ ಶಿಗ್ಗಾಂವಿ ತಾಲೂಕಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸ್ವ್ಯಾಬ್ ವರದಿ ಬರುವ ಮುನ್ನವೇ ಈತ ಮತ್ತೆ ಗುರುವಾರ ಹಾನಗಲ್ಲ ತಾಲೂಕಿನ ಗ್ರಾಮವೊಂದರಿಂದ ಮೇ 21ರಂದು ಅನಾನಸ್ ಲೋಡ್ ಮಾಡಿಕೊಂಡು ಬೆಂಗಳೂರಿಗೆ ತೆರಳಿದ್ದಾನೆ. ಶುಕ್ರವಾರ ಈತನಿಗೆ ಕರೊನಾ ಪಾಸಿಟಿವ್ ವರದಿ ಬರುತ್ತಿದ್ದಂತೆಯೇ ಅಧಿಕಾರಿಗಳು ಕ್ವಾರಂಟೈನ್ ಮಾಡಲು ಮುಂದಾದರು. ಆತನ ಪತ್ತೆಗೆ ಮುಂದಾದಾಗ ಬೆಂಗಳೂರಿಗೆ ಹೋಗಿರುವ ವಿಷಯ ಗೊತ್ತಾಗಿದೆ. ಈ ಕುರಿತು ಬೆಂಗಳೂರಿಗೆ ಮಾಹಿತಿ ನೀಡಿ ಆತನನ್ನು ಅಲ್ಲಿಯೇ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸುವ ಬದಲು ಅಲ್ಲಿಂದ ಆತನನ್ನು ಕರೆತರಲು ಅಧಿಕಾರಿಗಳ ತಂಡ ಕಳುಹಿಸಲಾಗಿದೆ. ಸಂಜೆ 5ರವರೆಗೂ ಸೋಂಕಿತ ವ್ಯಕ್ತಿ ಬೆಂಗಳೂರು ಮಾರುಕಟ್ಟೆಯಲ್ಲಿದ್ದು, ಅಲ್ಲಿ ಯಾರ್ಯಾರೊಂದಿಗೆ ಸಂಪರ್ಕಕ್ಕೆ ಬಂದಿದ್ದಾನೆ ಎಂಬುದು ತಿಳಿಯದು.
ಪಿ-1691 ಸೋಂಕಿತ ಮೇ 19ರಂದು ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆಗಾಗಿ ಗಂಟಲ ದ್ರವ ಕೊಟ್ಟು ಹೋಗಿದ್ದ. ಸ್ವಯಂ ಆಗಿ ಬಂದು ತಪಾಸಣೆ ಮಾಡಿಕೊಂಡರೆ ಅವರನ್ನು ಕ್ವಾರಂಟೈನ್ ಮಾಡುವುದಿಲ್ಲ. ಮಾದರಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ. ಇದರ ಬಗ್ಗೆ ಅರಿವಿಲ್ಲದ ಆತ ಬೆಂಗಳೂರಿಗೆ ಹೋಗಿದ್ದು ಹಾವೇರಿಗೆ ಕರೆತರಲಾಗುತ್ತಿದೆ. | ಎಂ. ಯೋಗೇಶ್ವರ ಅಪರ ಜಿಲ್ಲಾಧಿಕಾರಿ