ಜಿಲ್ಲೆ

ಜಿಲ್ಲೆಯ ಮತದಾರರಿಗೆ ಧನ್ಯವಾದ ಅರ್ಪಿಸಿದ ಕಾಂಗ್ರೆಸ್:ಜಿಲ್ಲಾಧ್ಯಕ್ಷ ಈ. ಲಕ್ಷ್ಮಣ್

ಹಾಸನ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಅಭೂತಪೂರ್ವ ಜಯ ತಂದುಕೊಟ್ಟ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಈ. ಲಕ್ಷ್ಮಣ್ ತಿಳಿಸಿದರು.
ಈ ಚನಾವಣೆಯಲ್ಲಿ ಸಣ್ಣ-ಪುಟ್ಟ ಮಸ್ತಾಪ ಇದ್ದರೂ ಕೂಡ ನಮ್ಮ ನಾಯಕರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಕ್ಕೆ ಪ್ರತಿಫಲ ಸಿಕ್ಕಿದೆ. ಜಿಲ್ಲೆಯ ಮತದಾರರು ಶ್ರೇಯಸ್ ಪಟೇಲ್ ಅವರಿಗೆ ಗೆಲುವು ಕೊಡುವುದರ ಮೂಲಕ 25 ವರ್ಷಗಳ ನಂತರ ನಮಗೆ ಶಕ್ತಿ ಕೊಟ್ಟಿದ್ದಾರೆ. ಎಲ್ಲಾ ಸಮುದಾಯದವರಿಗೂ ಕೂಡ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದವನ್ನು ಅರ್ಪಿಸುತ್ತೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಂಪಿ ಚುನಾವಣೆಯಲ್ಲಿ ಗೆಲುವಿಗೆ ಮೂಲ ಕಾರಣಕರ್ತರು ಜಿಲ್ಲಾ ಉಸ್ತುವಾರಿ ಸಚಿವರು. ಚುನಾವಣಾ ಉಸ್ತುವಾರಿ ಆಗಿರುವ ಜಿ.ಸಿ. ಚಂದ್ರಶೇಖರ್ ಅವರ ಚುನಾವಣಾ ಚಾಣಕ್ಯತನದಿಂದಾಗಿ ಇದ್ದಂತಹ ಅನೇಕ ವ್ಯತ್ಯಾಸಗಳನ್ನು ಸರಿಪಡಿಸಿ ಕೆಲಸ ಮಾಡಲು ಹುರಿದುಂಬಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜೋಡಿ ಎತ್ತುಗಳಾಗಿ ಎಲ್ಲ ಕ್ಷೇತ್ರಗಳಿಗೂ ಕೂಡ ಬಂದಿದ್ದರಿಂದ ಈ ಗೆಲುವು ಸಾಧ್ಯವಾಗಿದೆ. ಮತದಾರರು ಬದಲಾವಣೆ ಬಯಸಿ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಜವರೇಗೌಡ ಮಾತನಾಡಿ, ಎಂಪಿ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರನ್ನು ನೂತನ ಸಂಸದರಾದ ಶ್ರೇಯಸ್ ಪಟೇಲ್ ಜತೆ ಕೆಲವು ಮುಖಂಡರು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದೇವೆ. ಮುಂದಿನ ದಿನಗಳನ್ನು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ, ಅಭಿವೃದ್ಧಿ ಕೆಲಸ ಮಾಡಲು ನಾವು ಸಹಕಾರ ಕೊಡುತ್ತೇವೆ. ಪಕ್ಷ ಸಂಘಟನೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಈ ಜಿಲ್ಲೆಯಲ್ಲಿ ಪಕ್ಷದ ಜವಾಬ್ದಾರಿ ಹೆಚ್ಚು ಇದ್ದು, ಮೊದಲು ನಾವು ಮನುಷ್ಯರಾಗಿ ನಡೆದುಕೊಳ್ಳಬೇಕು. ದುರಂಕಾರದ ಪರಮಾವಧಿ ಯಾರಿಗೂ ಇರಬಾರದು. ಉತ್ತಮ ನಡವಳಿಕೆ ಇದ್ದರೆ ಅವನು ಯೋಗ್ಯ ಎಂದು ಸಮಾಜದಲ್ಲಿ ಹೇಳುತ್ತಾರೆ. ಯಾವುದೇ ಪಕ್ಷದ ರಾಜಕಾರಣಿ ಇರಲಿ ದುರಂಕಾರ ಇದ್ದರೆ ಮೊದಲು ಅದನ್ನು ಬಿಡಬೇಕು. ಮತದಾರ ಪ್ರಭುಗಳು ಕೊಟ್ಟಂತಹ ಭಿಕ್ಷೆ ಮೇಲೆ ನಾವು ಅಧಿಕಾರ ಮಾಡುವುದು. ಯಾವ ಸಂದರ್ಭದಲ್ಲಿ ಮತದಾರರು ಬಂದರು ನಾವು ಅವರಿಗೆ ನೋವುಂಟು ಮಾಡಬಾರದು ಎಚ್.ಡಿ. ರೇವಣ್ಣ ಕುಟುಂಬದವರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಸುದ್ದಿಗೋಷ್ಠಿಯಲ್ಲಿ ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಕೆಪಿಸಿಸಿ ಸದಸ್ಯ ಆರೀಫ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಗೆವಾಳ್ ದೇವಪ್ಪ ಇತರರು ಉಪಸ್ಥಿತರಿದ್ದರು.