ಹಾಸನ: ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಹಲವು ರೀತಿಯ ಮೂಲಭೂತ ಸೌಲಭ್ಯ ಇಲ್ಲ. ಮುಖ್ಯವಾಗಿ ಕರೆಂಟ್, ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಅನೇಕ ಸಮಸ್ಯೆ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ವರದಿ ತಯಾರಾಗಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಷಾರಾಣಿ ತಿಳಿಸಿದರು.
ಪೌಷ್ಟಿಕತೆ ನಿವಾರಣಾ ರಾಜ್ಯ ಸಲಹಾ ಸಮಿತಿ ಅಧ್ಯಕ್ಷರು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್. ವೇಣುಗೋಪಾಲಗೌಡ ಅವರ ನಿರ್ದೇಶನದ ಮೇರೆಗೆ ಜಿಲ್ಲೆಯ ಆಯ್ದ 70 ಅಂಗನವಾಡಿ ಕೇಂದ್ರಗಳಿಗೆ 42 ಹಿರಿಯ ನ್ಯಾಯಾಧೀಶರ ತಂಡ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ವೇಳೆ ಜಿಲ್ಲೆಯ ಬಹುತೇಕ ಅಂಗನವಾಡಿಗಳು ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಅನೇಕ ಸಮಸ್ಯೆಗಳಿಂದ ಕೂಡಿರುವುದು ಇದರ ಬಗ್ಗೆ ವರದಿ ತಯಾರಿಸಲಾಗಿದ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 2,691 ಅಂಗನವಾಡಿ ಕೇಂದ್ರಗಳಿದ್ದು, 3-6 ವರ್ಷದೊಳಗಿನ 69,813 ಮಕ್ಕಳಿದ್ದಾರೆ ಎಂಬುದು ದಾಖಲಾತಿಯಲ್ಲಿದೆ. ಆದರೆ ಭೇಟಿ ವೇಳೆ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದ್ದುದು ಕಂಡುಬಂದಿದೆ. 1,894 ಅಂಗನವಾಡಿ ಕೇಂದ್ರ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿವೆ. 423 ಪಂಚಾಯಿತಿ ಕಟ್ಟಡ, ಸಮುದಾಯ ಕೇಂದ್ರ, ಶಾಲಾ ಕೊಠಡಿಗಳಲ್ಲಿ ನಡೆಯುತ್ತಿವೆ. ಖಾಸಗಿ ಸಹಭಾಗಿತ್ವದಲ್ಲಿ 71, 303 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದು ವಿವರಿಸಿದರು.
483 ಅಂಗನವಾಡಿ ಕೇಂದ್ರಗಳು ದುರಸ್ತಿ ಮಾಡಲು ಸರ್ಕಾರದ ಅನುದಾನ ಇಲ್ಲದೆ ಶಿಥಿಲಾವಸ್ಥೆ ತಲುಪುತ್ತಿವೆ.2475 ಅಂಗನವಾಡಿಗಳಲ್ಲಿ ಶೌಚಾಲಯ ಇದ್ದರೂ, ಬಹುತೇಕ ಕಡೆ ಇದ್ದೂ ಇಲ್ಲದಂತಿದ್ದು ಬಳಸಲು ಯೋಗ್ಯವಾಗಿಲ್ಲ. 216 ಕಡೆ ಶೌಚಾಲಯವೇ ಇಲ್ಲ. ಇದರಿಂದ ಮಕ್ಕಳು, ಸಿಬ್ಬಂದಿ ಪರದಾಡುವಂತಾಗಿದೆ ಎಂದರು.
247 ಅಂಗನವಾಡಿಗಳಲ್ಲಿ ಶೌಚಾಲಯ ಹಾಳಾಗಿದ್ದು, ದುರಸ್ತಿ ಆಗಬೇಕಿದೆ. 2,372 ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದ್ದರೆ, 319 ಕಡೆ ಇಲ್ಲ. 2465 ಅಂಗನವಾಡಿ ಕೇಂದ್ರಗಳಲ್ಲಿ ಫ್ಯಾನ್ ಸೌಲಭ್ಯ ಇದ್ದರೂ, ಫ್ಯಾನ್‌ಗೆ ವಿದ್ಯುತ್ ಸಂಪರ್ಕವಿಲ್ಲದೆ ಫ್ಯಾನ್ ನಿಂತಿದೆ. 226 ಕಡೆ ಫ್ಯಾನ್ ಸೌಲಭ್ಯವೇ ಇಲ್ಲದೆ ಬೇಸಿಗೆಯಲ್ಲಿ ಮಕ್ಕಳು ದಗೆಯಿಂದ ಬಳಲುವಂತಾಗಿದೆ. 2,501 ಅಂಗನವಾಡಿಗಳಲ್ಲಿ ವಿದ್ಯುತ್ ಸಂಪರ್ಕವಿದ್ದು, 190 ಕ್ಕೆ ವಿದ್ಯುತ್ ಸಂಪರ್ಕ ಇಲ್ಲ ಎಂದು ಮಾಹಿತಿ ನೀಡಿದರು.
ಇಷ್ಟೆಲ್ಲಾ ಲೋಪದೋಷಗಳಿಂದಾಗಿ ಅಂಗನವಾಡಿ ಕಾರ್ಯಕರ್ತೆಯರೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಭೇಟಿ ಸಂದರ್ಭದಲ್ಲಿ ಕಂಡುಬಂದಿದೆ. ಎಷ್ಟೋ ಅಂಗನವಾಡಿಗಳಿಗೆ ಕಾಂಪೌಂಡ್ ಇಲ್ಲ, ಆಟದ ಮೈದಾನವಿಲ್ಲ, ಅಡುಗೆ ಕೋಣೆ, ಊಟದ ಕೋಣೆ, ಮಕ್ಕಳಿಗೆ ಆಟ-ಪಾಠ ಎಲ್ಲವೂ ಒಂದೇ ಕೊಠಡಿಯಲ್ಲಿ ಮಾಡಬೇಕಾದ ಅನಿವಾರ್ಯತೆ ಇದೆ. ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಪೌಷ್ಠಿಕ ಅಹಾರ ನೀಡಲಾಗುತ್ತಿದ್ದು, ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಕೆಗೆ ಸರ್ಕಾರ ಮುಂದಾಗಬೇಕಿದೆ ಮತ್ತು ಮೂಲಭೂತ ಸೌಕರ್ಯ ನೀಡುವ ಮೂಲಕ ಅಂಗನವಾಡಿ ಕೇಂದ್ರಗಳ ಗುಣಮಟ್ಟ ಹೆಚ್ಚಿಸ ಬೇಕಾಗಿರುತ್ತವೆ ಎಂದು ಹೇಳಿದರು.
ಈ ವರದಿಯನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ.ದಾಕ್ಷಾಯಿಣಿ, ಅಂಗನವಾಡಿ ಕೇಂದ್ರಗಳಲ್ಲಿ ಕಳೆದ ಡಿಸೆಂಬರ್‌ನಿಂದ ಮೊಟ್ಟೆ ನೀಡಿರಲಿಲ್ಲ. ಜುಲೈನಿಂದ ಮರು ಚಾಲನೆ ನೀಡಲಾಗಿದೆ. ಹೆಚ್ಚು ಕಡೆಗಳಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ನಗರದಲ್ಲಿ ವಿದ್ಯುತ್ ಬಿಲ್ ಬಾಕಿ
ಹಾಸನ ನಗರದ ಸುತ್ತಮುತ್ತಲ ಗ್ರಾಪಂ ಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದ್ದು, ನಗರಸಭೆ ವಿದ್ಯುತ್ ಸಂಪರ್ಕ ನೀಡದೆ, ಮೂಲ ಸೌಕರ್ಯ ಒದಗಿಸಿಲ್ಲ ಎಂಬುದು ಭೇಟಿ ವೇಳೆ ಕಂಡುಬಂದಿದೆ. ರಾಜ್ಯ ಸರ್ಕಾರದ ಗೃಹಜೋತಿ ಯೋಜನೆಯಡಿ ಶಾಲಾ ಕಾಲೇಜುಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುತ್ತಿದೆಯಾದರೂ ಸುಮಾರು ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ವಿದ್ಯುತ್ ಸಂಪರ್ಕ ಕಡಿತ ಗೊಳಿಸಲಾಗಿದೆ ಎಂದು ಹೇಳಿದರು.