ಜಿಲ್ಲೆ

ಜಿಲ್ಲೆಯ ಪ್ರಸಾದ್‌ರವರ ಕೊಡುಗೆ ಅಪಾರ

ಚಾಮರಾಜನಗರ: ಕೇಂದ್ರ ಸಚಿವರಾಗಿ, ಸಂಸದರಾಗಿ ವಿ.ಶ್ರೀನಿವಾಸ್‌ಪ್ರಸಾದ್ ಅವರು ಜಿಲ್ಲೆಗೆ ತಮ್ಮದೇಯಾದ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಹಿರಿಯ ಬರಹಗಾರ ಲಕ್ಷ್ಮೀ ನರಸಿಂಹ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಾರದ ಸಾಹಿತ್ಯ ಮಂಥನ ಕಾರ್ಯಕ್ರಮದಲ್ಲಿ ಕೇಂದ್ರ ಮಾಜಿ ಸಚಿವ ವಿ.ಶ್ರೀನಿವಾಸ್‌ಪ್ರಸಾದ್ ರವರ ಕೊಡುಗೆಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೈಸೂರು ಭಾಗದ ಪ್ರಬಲ ರಾಜಕಾರಣಿಯಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರು ಪ್ರಾಮಾಣಿಕ ರಾಜಕಾರಣಿಯಾಗಿ ಜನಸಾಮಾನ್ಯರೊಂದಿಗೆ ಸದಾ ಕಾಲ ಬೆರೆಯುತ್ತಿದ್ದರು. ಕರ್ನಾಟಕವನ್ನು ಪ್ರತಿನಿಧಿಸಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಇಡೀ ರಾಷ್ಟ್ರಕ್ಕೆ ಬದ್ಧತೆಯಿಂದ ಸೇವೆ ಸಲ್ಲಿಸಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ದಿಕ್ಕಿನಲ್ಲಿ ಅವರ ಶ್ರೇಷ್ಠ ಕಾರ್ಯಗಳು ಮರೆಯಲಾಗದು ಎಂದರು.

ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕನ್ನಡ ಸಂಘಟನೆಗಳ ಮೂಲಕ ಶ್ರೀನಿವಾಸ್‌ಪ್ರಸಾದ್ ಅವರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಗಿತ್ತು. ಅಪಾರ ಜ್ಞಾಪಕ ಶಕ್ತಿ, ದೃಢ ನಿರ್ಧಾರ ಹಾಗೂ ಸರ್ವರೊಂದಿಗೂ ಬೆರೆತು ಎಲ್ಲ ಜನಾಂಗಗಳ ಉದಯೋನ್ಮುಖ ನಾಯಕತ್ವದ ಬೆಳವಣಿಗೆಗೆ ಸಹಕಾರ ನೀಡಿದವರು ಎಂದರು.

ಕಾರ್ಯಕ್ರಮದಲ್ಲಿ ತಮಿಳು ಸಂಘದ ಅಧ್ಯಕ್ಷ ಜಗದೀಶ್, ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ, ಸದಸ್ಯ ರವಿಚಂದ್ರ ಪ್ರಸಾದ್, ನಗರಸಭಾ ಮಾಜಿ ಸದಸ್ಯ ಪದ್ಮಪುರುಷೋತ್ತಮ್, ಸರಸ್ವತಿ, ಬಿ.ಕೆ.ಆರಾಧ್ಯ ,ಶಿವಲಿಂಗ ಮೂರ್ತಿ ಇನ್ನಿತರರು ಹಾಜರಿದ್ದರು.