ಚಾಮರಾಜನಗರ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಮಾ.8 ರಂದು ಲೋಕ್ ಅದಾಲತ್ ಆಯೋಜನೆ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಾಮರಾಜನಗರದ ಜಿಲ್ಲಾ ನ್ಯಾಯಾಲಯ, ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲ ತಾಲೂಕು ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ನಡೆಯಲಿದೆ. ಲೋಕ್ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿದ್ದಲ್ಲಿ ಮುಂಚಿತವಾಗಿ ಚಾಮರಾಜನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳಾದ ಯಳಂದೂರು, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಗಳಲ್ಲಿ ಆನ್‌ಲೈನ್, ವಿಡಿಯೋ ಕಾನ್ಫೆರೆನ್ಸ್, ಇ ಮೇಲ್, ಎಸ್‌ಎಂಎಸ್, ವಾಟ್ಸ್ ಆಪ್ ಅಥವಾ ಖುದ್ದಾಗಿ ಹಾಜರಾಗುವ ಮೂಲಕ ಸಂಬಂಧಪಟ್ಟ ಪ್ರಾಧಿಕಾರ ಮತ್ತು ಸಮಿತಿಗಳನ್ನು ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹೇಳಿದರು.
ಲೋಕ್ ಅದಾಲತ್ ನಿಮಿತ್ತ ನ್ಯಾಯಲಯಗಳಲ್ಲಿ ಬಾಕಿ ಇರುವ ರಾಜಿಯೋಗ್ಯ ಪ್ರಕರಣಗಳನ್ನು ಶೀಘ್ರ ಹಾಗೂ ಪರಿಣಾಮಕಾರಿ ತೀರ್ಮಾನಕ್ಕಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಎ.ಡಿ.ಆರ್. ಕಟ್ಟಡದಲ್ಲಿ ಪೂರ್ವಭಾವಿ ಸಮಾಲೋಚನಾ ಕೇಂದ್ರವನ್ನು ತೆರೆಯಲಾಗಿದೆ. ನ್ಯಾಯಾಲಯಗಳಲ್ಲಿ ಉಭಯ ಪಕ್ಷಕಾರರು ರಾಜಿಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಭಾಂದವ್ಯ ಉಳಿದು ವಿವಾದವು ಅಂತಿಮಗೊಳ್ಳುತ್ತದೆ. ನ್ಯಾಯಾಲಯಗಳಲ್ಲಿ ದಾಖಲಾಗದೇ ಇರುವ ಪ್ರಕರಣಗಳೂ ಸಹ ವ್ಯಾಜ್ಯ ಪೂರ್ವ ಪ್ರಕರಣಗಳೆಂದು ಪರಿಗಣಿಸಿ, ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಹಾಜರಿದ್ದರು.
ಯಾವ ಪ್ರಕರಣಗಳು:
ಲೋಕ್ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕ ವೇತನ, ಗ್ರಾಹಕರ ವೇದಿಕೆ, ರಿಯಲ್ ಎಸ್ಟೇಟ್, ಸಾಲ ವಸೂಲಾತಿ, ಚೆಕ್ ಅಮಾನ್ಯ ಪ್ರಕರಣಗಳು, ಮೋಟಾರ್ ಅಪಘಾತ ಪರಿಹಾರ, ವಿದ್ಯುತ್ ಮತ್ತು ನೀರಿನ ಶುಲ್ಕ, ಭೂ ಸ್ವಾಧೀನ, ವೇತನ ಭತ್ಯೆ ಹಾಗೂ ಪಿಂಚಣಿ, ಸಾರ್ವಜನಿಕ ಉಪಯುಕ್ತತೆ ಸೇವೆಗಳು, ರಾಜಿ ಯೋಗ್ಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳು, ಕುಟುಂಬ ನ್ಯಾಯಾಲಯದ ಪ್ರಕರಣಗಳನ್ನು (ವಿವಾಹ ವಿಚ್ಛೇದನವನ್ನು ಹೊರತುಪಡಿಸಿ) ಇತ್ಯರ್ಥಪಡಿಸಲಾಗುತ್ತದೆ.
ನ್ಯಾಯಾಲಯದ ಶುಲ್ಕವೂ ವಾಪಸ್:
ಲೋಕ್ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಗಳಿಗೆ ಪಾವತಿಸಲಾದ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಮರು ಪಾವತಿಸಲಾಗುವುದು. ರಾಜಿ ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ವಿಶೇಷ ಅವಕಾಶವಾಗಿದೆ. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್‌ಗೆ ಸಂಬಂಧಿಸಿದಂತೆ ಪ್ರತಿದಿನ ಪೂರ್ವಭಾವಿ ಬೈಠಕ್‌ಗಳು ಭೌತಿಕ, ವಿ.ಸಿ. ಮೂಲಕ ನಡೆಯುತ್ತಿದ್ದು, ಇದರ ಮೂಲಕವೂ ಸಹ ಅರ್ಜಿ ಸಲ್ಲಿಸಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಸಹಾಯವಾಣಿ ಸಂಖ್ಯೆ 15100, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಹಾಯವಾಣಿ ಸಂಖ್ಯೆ 1800-425-90900, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಾಮರಾಜನಗರ ಸಹಾಯವಾಣಿ ಸಂಖ್ಯೆ 08226-226022, ತಾಲೂಕು ಕಾನೂನು ಸೇವಾ ಸಮಿತಿ ಯಳಂದೂರು ಸಹಾಯವಾಣಿ ಸಂಖ್ಯೆ 08226-240229, ಕೊಳ್ಳೇಗಾಲ ಸಹಾಯವಾಣಿ ಸಂಖ್ಯೆ 08224-256788, ಗುಂಡ್ಲುಪೇಟೆ ಸಹಾಯವಾಣಿ ಸಂಖ್ಯೆ 08229-223279 ಅನ್ನು ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರು ಲೋಕ್ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಪ್ರಕರಣ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಬಿ.ಎಸ್.ಭಾರತಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾ ನ್ಯಾಯಾಲಯ, ಚಾಮರಾಜನಗರ