ಜಿಲ್ಲೆ

ಜಿಲ್ಲೆಯ ನಾಲ್ಕು ಶಾಸಕರಿಗೆ ಸ್ಥಾಯಿ ಸಮಿತಿಯಲ್ಲಿ ಸ್ಥಾನ


ಚಾಮರಾಜನಗರ : ವಿಧಾನಮಂಡಲ/ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಜಿಲ್ಲೆಯ ನಾಲ್ಕು ಶಾಸಕರನ್ನು ಸರ್ಕಾರ ನೇಮಕ ಮಾಡಿದೆ.
ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಸಾರ್ವಜನಿಕ ಉದ್ದಿಮೆಗಳ ಸಮಿತಿ ಮತ್ತು ಹಕ್ಕು ಬಾಧ್ಯತೆಗಳ ಸಮಿತಿ ಸದಸ್ಯ, ಗುಂಡ್ಲುಪೇಟೆಯ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್‌ಗೆ ಮಹಿಳಾ ಮತ್ತು ಮಕ್ಕಳ ಸಮಿತಿ ಸದಸ್ಯರ, ಹನೂರಿನ ಶಾಸಕ ಎಂ.ಆರ್.ಮಂಜುನಾಥ್ ಅವರನ್ನು ಸಭೆಯ ಮುಂದಿಡುವ ಕಾಗದ ಪತ್ರಗಳ ಸಮಿತಿ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ.


ಈ ನಾಲ್ವರು ಶಾಸಕರಿಗೆ ಜವಾಬ್ದಾರಿ ಸಿಕ್ಕಿರುವುದಕ್ಕೆ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರುತ್ತಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ನಿರಾಸೆಯಾಗಿದ್ದವರಿಗೆ ಅಲ್ಪಸಮಾಧಾನ ಪಟ್ಟುಕೊಳ್ಳುವಂತಾಗಿದೆ.


ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಕೊನೆಗಳಿಗೆಯಲ್ಲಿ ಈ ಅವಕಾಶ ಕೈ ತಪ್ಪಿತು. ಬಿಜೆಪಿಯ ಪ್ರಭಾವಿ ನಾಯಕ ವಿ.ಸೋಮಣ್ಣ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ದೊಡ್ಡ ಸವಾಲನ್ನು ಹಿಮ್ಮೆಟ್ಟಿಸಿದರು. ಅಲ್ಲದೆ, ನಾಲ್ಕನೇ ಬಾರಿಗೆ ಗೆಲ್ಲುವ ಮೂಲಕ ಚಾಮರಾಜನಗರ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಉಳಿಸಿಕೊಂಡರು. ಹೈವೋಲ್ಟೇಜ್ ಕಣವಾಗಿ ಬದಲಾಗಿದ್ದ ಈ ಕ್ಷೇತ್ರದ ಲಿತಾಂಶವನ್ನು ರಾಜ್ಯವೇ ಎದುರು ನೋಡುತ್ತಿತ್ತು. ಸಿ.ಪುಟ್ಟರಂಗಶೆಟ್ಟಿ ಅವರ ಗೆಲುವು, ವಿ.ಸೋಮಣ್ಣ ಅವರ ಸೋಲು ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸಿತು. ಹೀಗೆ ಹೋರಾಟದ ಗೆಲುವು ದಾಖಲಿಸಿದ ಸಿ.ಪುಟ್ಟರಂಗಶೆಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ಹಿಂದಿನಿಂದಲೂ ನೆರಳಿನಂತೆ ಜತೆಗೆ ಇದೆ. ಈ ಹಿನ್ನೆಲೆಯಲ್ಲಿ ಇವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಭಾವಿಸಲಾಗಿತ್ತು. ಪಟ್ಟಿಯಲ್ಲಿ ಹೆಸರಿದ್ದರೂ ಕೊನೆ ಗಳಿಗೆಯಲ್ಲಿ ಸಚಿವರಾಗುವ ಅವಕಾಶ ಕೈ ತಪ್ಪಿತು. ಬಳಿಕ ಪಕ್ಷದ ವರಿಷ್ಠರು ಮತ್ತು ಸಿಎಂ ಸೂಚನೆ ಮೇರೆಗೆ ಒಲ್ಲದ ಮನಸ್ಸಿನಿಂದ ಉಪಸಭಾಪತಿ ಸ್ಥಾನ ಅಲಂಕರಿಸಬೇಕಾದ ಒತ್ತಡವಿತ್ತು. ಕೊನೆಗೆ ರುದ್ರೇಶ್ ಲಮಾಣಿ ಉಪಸಭಾಪತಿಯಾದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಇದರಿಂದ ಬಿಗ್ ರಿಲ್ೀ ಆಗಿ ಮತ್ತೆ ಕ್ಷೇತ್ರದಲ್ಲಿ ಎಂದಿನಂತೆ ತಮ್ಮ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಈ ಮಧ್ಯೆ ಇವರಿಗೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿದೆ.

ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ ಎಆರ್‌ಕೆ:
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಸಾರ್ವಜನಿಕ ಉದ್ದಿಮೆಗಳ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ, ಈ ಹಿಂದಿನ ಶಾಸಕ ಎನ್.ಮಹೇಶ್ ವಿರುದ್ಧ ಗೆದ್ದ ಎ.ಆರ್.ಕೃಷ್ಣಮೂರ್ತಿ ಅವರಿಗೆ ಹಿರಿತನ, ಮಾಜಿ ರಾಜ್ಯಪಾಲ ಮತ್ತು ಜಿಲ್ಲೆಯ ಅಸ್ಮಿತೆ ಎನಿಸಿಕೊಂಡಿರುವ ಬಿ.ರಾಚಯ್ಯ ಅವರ ಪುತ್ರನೆಂಬ ಹೆಗ್ಗಳಿಕೆ ಇದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಗಬಹುದೆಂದು ಕೆಲವರು ಲೆಕ್ಕಾಚಾರ ಹಾಕಿದ್ದರು. ತೆರೆಮರೆಯಲ್ಲಿ ಕಸರತ್ತುಗಳೂ ನಡೆದಿದ್ದವು ಎಂದು ಹೇಳಲಾಗುತ್ತಿದೆ. ಆದರೆ ಮಂತ್ರಿಗಿರಿ ಒಲಿದುಬಂದಿಲ್ಲ. ಇವರ ಅಭಿಮಾನಿಗಳು ಇಂದಿಗೂ ಸಹ ಎ.ಆರ್.ಕೃಷ್ಣಮೂರ್ತಿ ಅವರನ್ನು ದೊಡ್ಡ ಸ್ಥಾನದಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಎಚ್.ಎಂ.ಜಿಗೆ ಮಹಿಳೆ ಮತ್ತು ಮಕ್ಕಳ ಸಮಿತಿ:
ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮೊದಲ ಬಾರಿಗೆ ಗೆದ್ದಿರುವ ಕಾರಣ ಮತ್ತು ಹಿರಿಯರಿಗೆ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಸಚಿವ ಸ್ಥಾನದ ನಿರೀಕ್ಷೆ ಮಾಡಲಿಲ್ಲ. ಇವರ ಬೆಂಬಲಿಗರು ಒತ್ತಾಯ ಮಾಡಿದಾಗಲೂ ಕೂಡ ಬಾಯಿ ಮಾತಿಗೂ ಸಚಿವ ಸ್ಥಾನ ಕೇಳಿದರಲ್ಲ. ಇದೀಗ ಗುಂಡ್ಲುಪೇಟೆಯ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್‌ಗೆ ಮಹಿಳಾ ಮತ್ತು ಮಕ್ಕಳ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಕಾಗದ ಪತ್ರ ಸಮಿತಿಯಲ್ಲಿ ಎಂ.ಆರ್.ಎಂ: ಹನೂರು ಶಾಸಕ ಎಂ.ಆರ್.ಮಂಜುನಾಥ್‌ಗೆ ಸಭೆಯ ಮುಂದಿಡುವ ಕಾಗದ ಪತ್ರ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಹ್ಯಾಟ್ರಿಕ್ ಶಾಸಕ ಆರ್.ನರೇಂದ್ರ ವಿರುದ್ಧ ಗೆದ್ದ ಎಂ.ಆರ್.ಮಂಜುನಾಥ್ ಕ್ಷೇತ್ರದಲ್ಲಿ ಸಂಪ್ರದಾಯದಂತೆ ನಡೆದುಬಂದಿದ್ದ ಕುಟುಂಬ ರಾಜಕೀಯಕ್ಕೆ ಕಡಿವಾಣ ಹಾಕಿದರು.