ಜಿಲ್ಲೆ

ಜಿಲ್ಲೆಯ ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ನಿರ್ಧಾರ

ಹಾಸನ: ನಗರದ ಶ್ರೀ ಸಪ್ತಪಧಿ ಸೌಧಾಮಿನಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ದೇವಾಲಯದ ಸಂರಕ್ಷಣೆ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತ ನೂರಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು ದೇವಸ್ಥಾನ ವಿಶ್ವಸ್ಥರು ತೀರ್ಮಾನ ತೆಗೆದುಕೊಂಡರು.
ದೇವಸ್ಥಾನಗಳ ನಿರ್ವಹಣೆಯಲ್ಲಿ ಬರುವ ಕಾನೂನು ಸಮಸ್ಯೆಗಳಿಗೆ ನುರಿತ ವಕೀಲರು ಕಾನೂನು ಸಲಹೆಗಳನ್ನು ನೀಡಿದರು. ನಂತರ ಮುಂದಿನ ಕಾರ್ಯ ಯೋಜನೆ ಬಗ್ಗೆ ಗುಂಪು ಚರ್ಚೆ ನಡೆಯಿತು. ಈ ಗುಂಪು ಚರ್ಚೆಯಲ್ಲಿ ಜಿಲ್ಲಾದ್ಯಂತ ನೂರಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವ ಬಗ್ಗೆ ನಿರ್ಣಯ ತೆಗೆದುಕೊಂಡರು. ದೇವಸ್ಥಾನಗಳಲ್ಲಿ ಧರ್ಮ ಶಿಕ್ಷಣ ಪ್ರಾರಂಭಿಸುವುದು ಮತ್ತು ಇತ್ಯಾದಿ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಸಭೆಯ ಕೊನೆಯಲ್ಲಿ ಎಲ್ಲ ವಿಶ್ವಸ್ಥರು ಕೆಲವು ಠರಾವುಗಳಿಗೆ ಅನುಮೋದನೆ ನೀಡಿದರು.
ಶಂಕರ ಮಠದ ಧರ್ಮದರ್ಶಿ ಎಂ.ಎಸ್. ಶ್ರೀಕಂಠಯ್ಯ ಮಾತನಾಡಿ, ದೇವಸ್ಥಾನದ ಗರ್ಭಗುಡಿಯ ರಕ್ಷಣೆ, ಸುತ್ತಮುತ್ತಲಿನ ಪರಿಸರದ ರಕ್ಷಣೆ ಹಾಗೂ ದೇವಸ್ಥಾನದ ಜಮೀನಿನ ರಕ್ಷಣೆಯನ್ನು ಕೇವಲ ಸ್ಥಳೀಯ ಸಂಘಟನೆಯಿಂದ ಮಾತ್ರ ರಕ್ಷಣೆ ಮಾಡಲು ಸಾಧ್ಯವಿದೆ . ಹಾಗಾಗಿ ನಾವೆಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಿ ಸಂಘಟಿತರಾಗೋಣ. ನಮ್ಮಲ್ಲಿ ಇರುವ ಭಿನ್ನಾಭಿಪ್ರಾಯವನ್ನು ಮರೆತು ಎಲ್ಲರೂ ಕೈಜೋಡಿಸಿ ಸಂಘಟಿತರಾಗಿ ಸರ್ಕಾರಕ್ಕೆ ಒತ್ತಡ ಹೇರಿದರೆ ನಮ್ಮ ದೇವಸ್ಥಾನಗಳನ್ನು ಸರ್ಕಾರೀಕರಣದಿಂದ ರಕ್ಷಣೆ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕ ಮೋಹನ್ ಗೌಡ ಮಾತನಾಡಿ, ಕರ್ನಾಟಕದಲ್ಲಿ 34,000 ದೇವಸ್ಥಾನಗಳನ್ನು ಸರ್ಕಾರ ನಿಯಂತ್ರಣ ಮಾಡುತ್ತಿದೆ. ಇದರಲ್ಲಿ ಹೆಚ್ಚಿನ ದೇವಸ್ಥಾನಗಳು ಅವ್ಯವಹಾರದ ಆಗರವಾಗಿವೆ. ಈ ದೇವಸ್ಥಾನಗಳನ್ನು ಸರ್ಕಾರದ ಮುಷ್ಟಿಯಿಂದ ಹೊರತರಲು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ. ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಕಾರ್ಯಕ್ಕೆ ಮುಂದಾಗಿದ್ದು, ಅದರಲ್ಲಿ ತಾವೆಲ್ಲರೂ ಕೈ ಜೋಡಿಸಿ ಎಂದು ಕರೆ ನೀಡಿದರು.
ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಚಂದ್ರ ಮೊಗವೀರ ಮಾತನಾಡಿ, ಸನಾತನ ಧರ್ಮದಲ್ಲಿ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಳಗಳು. ದೇವಸ್ಥಾನಗಳು ಎಂದರೆ ದೇವರು ಇರುವ ಕ್ಷೇತ್ರ. ನಮ್ಮ ದೇವಸ್ಥಾನವನ್ನು ಆದರ್ಶ ರೀತಿಯಲ್ಲಿ ಹೇಗೆ ನಡೆಸಬೇಕು, ನಮ್ಮ ದೇವಸ್ಥಾನವನ್ನು ಯಾವ ರೀತಿ ಧಾರ್ಮಿಕ ಕೇಂದ್ರ ಬಿಂದುವಾಗಿ ಮಾಡಬೇಕು ಹಾಗೂ ದೇವಸ್ಥಾನದಲ್ಲಿ ಸಾತ್ತ್ವಿಕ ಉಡುಪು ಧರಿಸುವುದರಿಂದ ಯಾವ ರೀತಿ ದೇವರ ಚೈತನ್ಯ ಪಡೆಯಬಹುದು ಎಂದು ವಸ್ತ್ರ ಸಂಹಿತೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೊಳೆ ಮಲ್ಲೇಶ್ವರ ದೇವಸ್ಥಾನದ ಕಾರ್ಯದರ್ಶಿ ಮಂಜುನಾಥ್, ಉತ್ತರಮುಖಿ ಉತ್ತಿಷ್ಟ ಗಣಪತಿ ದೇವಸ್ಥಾನದ ಅಧ್ಯಕ್ಷ ರಾಘವೇಂದ್ರ ಹಾಗೂ ಜಿಲ್ಲೆಯ ಸುಮಾರು 150ಕ್ಕೂ ಹೆಚ್ಚು ಅರ್ಚಕರು ಹಾಗೂ ದೇವಸ್ಥಾನದ ಆಡಳಿತದ ಅಧ್ಯಕ್ಷರು ಭಾಗವಹಿಸಿದ್ದರು.