ಜಿಲ್ಲೆ

ಜಿಲ್ಲೆಯ ಐವರಿಗೆ ಕರೊನಾ ಪಾಸಿಟಿವ್

ಗದಗ :ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದ್ದು, ಗುರುವಾರ ಮತ್ತೆ ಐವರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 58ಕ್ಕೆ ಏರಿಕೆಯಾದಂತಾಗಿದೆ.

ಮಹಾರಾಷ್ಟ್ರದಿಂದ ರೈಲಿನ ಮೂಲಕ ನಗರಕ್ಕೆ ಆಗಮಿಸಿ ಕ್ವಾರಂಟೈನ್​ನಲ್ಲಿ ಇರುವ 37 ವರ್ಷದ ಪುರುಷ ಹಾಗೂ 23 ವರ್ಷದ ಪುರುಷನಲ್ಲಿ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಅದೇರೀತಿ ಗದಗ ತಾಲೂಕಿನ ಹರ್ತಿ ಗ್ರಾಮಕ್ಕೆ ಹುಬ್ಬಳ್ಳಿಯಿಂದ ಬಂದಿದ್ದ ಪುರುಷನ ಸಂಪರ್ಕದಿಂದ 40 ವರ್ಷದ ಪುರುಷ , 45 ವರ್ಷದ ಮಹಿಳೆ ಹಾಗೂ 23 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.

ಹುಬ್ಬಳ್ಳಿಯಿಂದ ಹರ್ತಿ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಬಂದಿದ್ದ ಪುರುಷನಿಗೆ ಹುಬ್ಬಳ್ಳಿಯಲ್ಲಿ ಕರೊನಾ ಸೋಂಕು ಇರುವುದು ಇತ್ತೀಚೆಗೆ ದೃಢಪಟ್ಟಿತ್ತು. ಸೋಂಕಿತ ಐವರನ್ನೂ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್) ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹರ್ತಿ ಗ್ರಾಮದ ಮೂವರು ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರ ಕುರಿತು ಸರ್ವೆ ಕಾರ್ಯ ಆರಂಭಿಸಲಾಗಿದ್ದು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಮನೆಮನೆಗೆ ಭೇಟಿ ಸಾರ್ವಜನಿಕರ ಆರೋಗ್ಯ ತಪಾಸಣೆ ಆರಂಭಿಸಿದ್ದಾರೆ.

ಮುಂಬೈನಿಂದ ರೈಲು ಮೂಲಕ ಗದಗ ರೈಲು ನಿಲ್ದಾಣಕ್ಕೆ ಆಗಮಿಸಿ ಪ್ರತ್ಯೇಕ ನಿಗಾದಲ್ಲಿದ್ದ ಮೂಲತಃ ಕಲಘಟಗಿ 37 ವರ್ಷದ ಪುರುಷ, 23 ವರ್ಷದ ಪುರುಷ ಇವರಿಗೆ ಸೋಂಕು ದೃಢಪಟ್ಟಿದೆ. ಗದಗ ತಾಲೂಕಿನ ಹರ್ತಿ ಗ್ರಾಮದ 40 ವರ್ಷದ ಪುರುಷ, 45 ವರ್ಷದ ಮಹಿಳೆ ಹಾಗೂ 23 ವರ್ಷದ ಪುರುಷ ಇವರಿಗೆ ಸೋಂಕು ದೃಢಪಟ್ಟಿದೆ. ಈ ಮೂವರಿಗೂ 45 ವರ್ಷದ ಪುರುಷನ ಸಂಪರ್ಕದಿಂದ ಸೋಂಕು ಹರಡಿದೆ. ಸೋಂಕಿತ ಧಾರವಾಡದಿಂದ ಹರ್ತಿ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಜೂ. 6 ರಂದು ಆಗಮಿಸಿ ಅದೇ ದಿನ ಮರಳಿ ಧಾರವಾಡಕ್ಕೆ ಪ್ರಯಾಣಿಸಿದ್ದರು. ಅವರ ಸಂಪರ್ಕದಿಂದ ಸೋಂಕು ತಗುಲಿದೆ. ಜೂ. 12 ರಂದು ಪುರುಷನಲ್ಲಿ ಸೋಂಕು ದೃಢಪಟ್ಟಿತ್ತು. ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಜನರನ್ನು ಗುರುತಿಸಿ ನಿಗಾದಲ್ಲಿರಿಸಲಾಗಿದೆ. ಅಲ್ಲದೆ, ಅವರ ಗಂಟಲ ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಮೂವರಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಜೂ. 2ರಿಂದ ಗುರುವಾರದವರೆಗೆ ಮುಂಬೈನಿಂದ ರೈಲು ಮೂಲಕ ನಗರಕ್ಕೆ ಒಟ್ಟು 904 ಪ್ರಯಾಣಿಕರು ಆಗಮಿಸಿದ್ದಾರೆ.

ಇದರಲ್ಲಿ 343 ಜನರು ಗದಗ ಜಿಲ್ಲೆಗೆ ಸೇರಿದ್ದು, 292 ಜನರನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಹಾಗೂ 51 ಜನರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. 343 ಜನರ ಪೈಕಿ 13 ಜನರಲ್ಲಿ ಕೋವಿಡ್-19 ಸೋಂಕು ಧೃಡಪಟ್ಟಿದೆ. 561 ಜನರು ಬೇರೆ ಜಿಲ್ಲೆಯವರಾಗಿದ್ದು, ಅವರನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯ ಕೋವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ-ಅಂಶಗಳನ್ನು ಗುರುವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬಿಡುಗಡೆ ಮಾಡಿದ್ದು, ಇದುವರೆಗೆ ಜಿಲ್ಲೆಯಲ್ಲಿ 7359 ಜನರು ನಿಗಾಕ್ಕೆ ಒಳಗಾಗಿದ್ದಾರೆ.

7917 ಗಂಟಲ ಮಾದರಿ ಸಂಗ್ರಹ:27 ಜನರನ್ನು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಲಾಗಿದೆ. ಸೋಂಕಿನ ಪರೀಕ್ಷೆಗಾಗಿ 7917 ಮಾದರಿಗಳನ್ನು ಸಂಗ್ರಹಿಸಲಾಗಿದೆ. 7703 ಮಾದರಿಗಳ ವರದಿ ನೆಗೆಟಿವ್ ಬಂದಿದ್ದು, 156 ಮಾದರಿಗಳ ವರದಿ ಬರಬೇಕಿದೆ. ಒಟ್ಟು ಜಿಲ್ಲೆಯಲ್ಲಿ 58 ಕೋವಿಡ್-19 ಪಾಸಿಟಿವ್ ಪ್ರಕರಣಗಳಿದ್ದು, ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 41 ಜನರು ಗುಣವಾಗಿದ್ದಾರೆ. 15 ಸಕ್ರಿಯ ಪ್ರಕರಣಗಳಿವೆ.

ಗದಗ-ಬೆಟಗೇರಿ ನಗರ ಸಭೆಯ ಸೆಟ್ಲ್​ಮೆಂಟ್ ಏರಿಯಾ ವಾರ್ಡ್ ನಂ. 2ರ ಸುತ್ತಲಿನ 100 ಮೀ. ಪ್ರದೇಶವನ್ನು ನಿಯಂತ್ರಿತ (ಕಂಟೇನ್ಮೆಂಟ್) ಪ್ರದೇಶವೆಂದು ಮತ್ತು ಪ್ರದೇಶದ ವ್ಯಾಪ್ತಿಯ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಸುತ್ತಳತೆಯ ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರನ್ನು ಇನ್ಸಿಂಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ವಾರ್ಡ್ ನಂ. 1 ಮತ್ತು 2 ರ ಸುತ್ತಲಿನ 100 ಮೀ. ಪ್ರದೇಶವನ್ನು ನಿಯಂತ್ರಿತ (ಕಂಟೇನ್ಮೆಂಟ್) ಪ್ರದೇಶವೆಂದು ಮತ್ತು ಪ್ರದೇಶದ ವ್ಯಾಪ್ತಿಯ ಸುತ್ತಲಿನ 7 ಕಿ.ಮೀ ವ್ಯಾಪ್ತಿಯ ಸುತ್ತಳತೆಯ ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಜಿ.ಪಂ. ಯೋಜನಾ ನಿರ್ದೇಶಕ ಸಿ.ಆರ್. ಮುಂಡರಗಿ ಅವರನ್ನು ಇನ್ಸಿಂಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ನಿಯಂತ್ರಿತ ಪ್ರದೇಶದಿಂದ ಇತರೆ ಪ್ರದೇಶಗಳಿಗೆ ಅಥವಾ ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಕ್ಕೆ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿ ಹೊರತುಪಡಿಸಿ ಜನರ ಪ್ರವೇಶವನ್ನು ನಿರ್ಬಂಧಿಸಿದೆ. ಬಫರ್ ಜೋನ್​ನ ಮೊದಲ ಒಂದು ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ಬಫರ್ ಜೋನ್ ಇರಲಿದ್ದು ಅಲ್ಲಿ ಪ್ರತಿ ಮನೆ ಮನೆಗಳಲ್ಲೂ ಆರೋಗ್ಯ ತಪಾಸಣೆ ನಡೆಸಲಾಗುವುದು. ನಿಯಂತ್ರಿತ ವಲಯಗಳಲ್ಲಿ ಎಲ್ಲ ದಿನಸಿ ಅಂಗಡಿಗಳು, ಹಾಲಿನ ಅಂಗಡಿಗಳು, ಮಾಂಸ, ಔಷಧ ಸೇರಿ ಎಲ್ಲ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.