ಜಿಲ್ಲೆ

ಜಿಲ್ಲೆಯ ಏಕೈಕ ಡಿಜಿಟಲೀಕರಣ ತಾಲೂಕು ಹಾನಗಲ್ಲ

ಹಾನಗಲ್ಲ: ತಾಲೂಕಿನ ರೈತರ ಕೃಷಿ ದಾಖಲೆಗಳು ಮತ್ತು ಸಾರ್ವಜನಿಕರ 40 ಲಕ್ಷ ಪುಟ ಕಂದಾಯ ದಾಖಲೆಗಳನ್ನೆಲ್ಲ ಡಿಜಿಟಲೀಕರಣ ಮಾಡಲಾಗಿದ್ದು, ಕಂದಾಯ ದಾಖಲೆಗಳು ಸಂಪೂರ್ಣ ಡಿಜಿಟಲೀಕರಣಗೊಂಡ ಜಿಲ್ಲೆಯ ಏಕೈಕ ತಾಲೂಕು ಹಾನಗಲ್ಲ ಆಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ನಾಡಕಚೇರಿಯ ನೂತನ ಕಟ್ಟಡ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಇನ್ಮುಂದೆ ಕಂದಾಯ ದಾಖಲೆಗಳಿಗೆ ತಹಸೀಲ್ದಾರ್ ಕಚೇರಿಗೆ ಅಲೆಯುವಂತಿಲ್ಲ. ಬೆರಳ ತುದಿಯಲ್ಲಿ ಎಲ್ಲ ದಾಖಲೆಗಳೂ ಸಿಗಲಿವೆ. ಇದರಿಂದ ಅನಗತ್ಯ ಕಾಲಹರಣ, ಕೆಲಸ, ಕಾರ್ಯಗಳನ್ನು ಬದಿಗೊತ್ತಿ, ಹಣ ಖರ್ಚು ಮಾಡಿ ಅಲೆಯುವುದು ತಪ್ಪಲಿದೆ. ಇದೇ ರೀತಿ ಕಂದಾಯ ಇಲಾಖೆಯಲ್ಲಿ ಹಲವು ಮಹತ್ವಪೂರ್ಣ ಬದಲಾವಣೆ ತರುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.

ಕಂದಾಯ ಗ್ರಾಮ, ಉಪ ಗ್ರಾಮಗಳ ರಚನೆಯ ಮೂಲಕ ಅನಧಿಕೃತ ವಸತಿ ಪ್ರದೇಶಗಳನ್ನು ಅಧಿಕೃತಗೊಳಿಸಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ 90ಕ್ಕಿಂತ ಹೆಚ್ಚು ಕಂದಾಯ ಗ್ರಾಮ, ಉಪ ಗ್ರಾಮಗಳು ರಚನೆಯಾಗಲಿದ್ದು, ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ದಾಖಲೆ ರಹಿತವಾಗಿ ಮನೆ ನಿರ್ವಿುಸಿಕೊಂಡು ವಾಸಿಸುತ್ತಿರುವ 15 ಸಾವಿರ ಕುಟುಂಬಗಳಿಗೆ ಮನೆ ಮಾಲೀಕತ್ವ ಲಭಿಸಲಿದೆ ಎಂದರು.

ಶಿಗ್ಗಾಂವಿ-ಸವಣೂರು ಶಾಸಕ ಯಾಸೀರಖಾನ್ ಪಠಾಣ ಮಾತನಾಡಿ, ಕರ್ನಾಟಕ ಭೂ ಸುಧಾರಣೆ ಅಧಿನಿಯಮಕ್ಕೆ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ತಿದ್ದುಪಡಿ ತರಲಾಗಿತ್ತು. ಇದರನ್ವಯ ಹಾನಗಲ್ಲ ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ಅಧಿನಿಯಮ ತಿದ್ದುಪಡಿ ಮಾಡಿರುವ ಅವಕಾಶ ಬಳಸಿಕೊಂಡು ಸಾವಿರಾರು ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇದರ ಫಲವಾಗಿ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಭೂ ಗ್ಯಾರಂಟಿ ಭಾಗ್ಯ ಲಭಿಸುವಂತಾಗಿದೆ. ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿಯೂ ಈ ನಿಟ್ಟಿನಲ್ಲಿ ಚುರುಕಾಗಿ ಕೆಲಸ ಮಾಡಲಾಗುತ್ತಿದೆ ಎಂದರು.

ತಹಸೀಲ್ದಾರ್ ಎಸ್. ರೇಣುಕಾ, ಕೆಡಿಪಿ ಸದಸ್ಯ ಮಹ್ಮದಹನೀಫ್ ಬಂಕಾಪೂರ, ಗ್ರಾಪಂ ಸದಸ್ಯರಾದ ಅರುಣ ಮಲ್ಲಮ್ಮನವರ, ಪತಂಗಸಾಬ್ ಮಕಾನದಾರ, ರಾಮಣ್ಣ ವಡ್ಡರ, ಲಕ್ಷ್ಮೀ ಕಲಾಲ, ಗದಿಗೆವ್ವ ಚಿಕ್ಕಣಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಪದ್ಮಾ ಬೇಂದ್ರೆ, ಮುಖಂಡರಾದ ಚನ್ನಬಸಣ್ಣ ಬಿದರಗಡ್ಡಿ, ನಾಗರಾಜ ಮಲ್ಲಮ್ಮನವರ, ಮಲ್ಲನಗೌಡ ಪಾಟೀಲ, ಚಮನಸಾಬ್ ಪಾಟೀಲ, ಮಲ್ಲೇಶಪ್ಪ ಕ್ಷೌರದ, ರಾಮಣ್ಣ ರಾಮಜಿ, ಮಾರುತಿ ಮುದುಕಣ್ಣನವರ, ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಚಂದ್ರಪ್ಪ ಜಾಲಗಾರ, ವೀರೇಶ ಬೈಲವಾಳ, ಭರಮಣ್ಣ ಶಿವೂರ, ಆದರ್ಶ ಶೆಟ್ಟಿ ಇತರರಿದ್ದರು.