ಬೀದರ್: ವ್ಯವಸ್ಥೆ ಬಲಪಡಿಸುವ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಕೆಪಿಎಸ್)ಗಳನ್ನು ಕಂಪ್ಯೂಟರೀಕರಣ ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಹೇಳಿದರು.
ನಗರದ ಡಿಸಿಸಿ ಬ್ಯಾಂಕಿನ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಸಂಘಗಳ ಕಂಪ್ಯೂಟರ್ ಆಪರೇಟರ್ ಮತ್ತು ಸಿಇಒಗಳಿಗೆ ಏರ್ಪಡಿಸಿದ್ದ ಮೂರು ದಿನದ ತರಬೇತಿಯಲ್ಲಿ ಮಂಗಳವಾರ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಎಲ್ಲ ಸಂಘಗಳಿಗೆ ಕಂಪ್ಯೂಟರ್ ಒದಗಿಸಿದ್ದು, ಬ್ಯಾಂಕಿಂಗ್ ತಂತ್ರಾಂಶ ಅಳವಡಿಸಲಾಗಿದೆ. ವರ್ಷಾಂತ್ಯದಲ್ಲಿ ಡಿಜಟಲೀಕರಣ ಮಾಡಿ ವ್ಯವಹಾರ ಆರಂಭಿಸುವಂತೆ ತರಬೇತಿ ಆಯೋಜಿಸಲಾಗಿದೆ ಎಂದರು.
ಸಂಘಗಳಿಗೆ ಒದಗಿಸಿದ ತಂತ್ರಾಂಶ ಕೋರ್ ಬ್ಯಾಂಕಿಂಗ್ ಸೇವೆ ಆಧರಿತ ಆಗಿದ್ದರಿಂದ ವ್ಯವಹಾರ ಮಾಹಿತಿ ಕೇಂದ್ರೀಯ ಸರ್ವರ್ಗಳಲ್ಲಿ ದಾಖಲಿಸಲ್ಪಡುತ್ತದೆ. ಇದರಿಂದ ಸ್ಥಳೀಯವಾಗಿರುವ ಸಂಘದ ಕಂಪ್ಯೂಟರ್ ಕೆಟ್ಟರೂ ದಾಖಲೆಗಳು ಸುರಕ್ಷಿತವಾಗಿರಲಿವೆ. ಸರ್ಕಾರದ ಸಹಾಯಧನ, ಕೃಷಿ ಸಾಲ ಮನ್ನಾ ಯೋಜನೆ ಹೀಗೆ ನಿಖರ ಮಾಹಿತಿ ತ್ವರಿತವಾಗಿ ಲಭ್ಯವಾಗುವುದರಿಂದ ರೈತರಿಗೆ ಅನುಕೂಲವಾಗಲಿದೆ. ಯೋಜನೆ ಜಾರಿಯಲ್ಲಿ ವಿಳಂಬ ತಪ್ಪಲಿದೆ. ಸಹಕಾರ ಸಂಘಗಳು ಸಹ ರಾಷ್ಟ್ರೀಕೃತ ಬ್ಯಾಂಕ್ಗಳಂತೆ ಕಾರ್ಯಾಚರಣೆ ಮಾಡಲಿವೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಜಿಎಂ ವಿಠ್ಠಲರಡ್ಡಿ ಯಡಮಲ್ಲೆ, ಸಂಪನ್ಮೂಲ ವ್ಯಕ್ತಿ ವೆಂಕಟೇಶ ಇದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿ ನಿರೂಪಣೆ ಮಾಡಿದರು. ಉಪನ್ಯಾಸಕ ಎಸ್.ಜಿ. ಪಾಟೀಲ್ ವಂದಿಸಿದರು.
ಜಿಲ್ಲೆಯ 3 ಲಕ್ಷ ಕುಟುಂಬಗಳಲ್ಲಿ 2.60 ಲಕ್ಷ ಕುಟುಂಬಗಳನ್ನು ಸಹಕಾರ ಸಂಘ ಸದಸ್ಯರಾಗಿ ಮಾಡಿ ಸಾಲ ನೀಡಲಾಗುತ್ತಿದೆ. ಜಿಲ್ಲೆಯ ಶೇ.70 ಕೃಷಿ ಸಾಲ ಡಿಸಿಸಿ ಬ್ಯಾಂಕ್ ನೀಡುತ್ತಿದ್ದು, ರಾಜ್ಯದಲ್ಲಿ ಹೆಚ್ಚು ಕೃಷಿ ಸಾಲದ ಪಾಲುಗಾರಿಕೆ ಹೊಂದಿರುವ ಸಹಕಾರ ಬ್ಯಾಂಕ್ ಆಗಿದೆ.| ಚನ್ನಬಸಯ್ಯ ಸ್ವಾಮಿಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ