ಹಾಸನ : ಜನಪ್ರತಿನಿಧಿಗಳ ಬೇಜವಾಬ್ದಾರಿತನ, ಕೃಷಿ, ತೋಟಗಾರಿಕೆ ಹಾಗು ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಜಿಲ್ಲೆಯ ಬರ ಪರಿಸ್ಥಿತಿಯ ನೈಜ ವರದಿಯನ್ನು ಸರ್ಕಾರಕ್ಕೆ ನೀಡುವಲ್ಲಿ ವಿಫಲವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಮನುಕುಮಾರ್ ದೂರಿದರು.
ಜಿಲ್ಲಾದ್ಯಂತ ಮಳೆ ಕೊರತೆಯಿಂದ ಬಿತ್ತನೆ ಮಾಡಿದ್ದ ಬೆಳೆ ಒಣಗುತ್ತಿದ್ದರೂ ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸದೆ ಇರುವುದರಿಂದ ಅರಸೀಕೆರೆ, ಆಲೂರು, ಹಾಸನ ತಾಲೂಕು ಸಾಧಾರಣ ಬರಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಮಲತಾಯಿ ಧೋರಣೆ ತೋರಿದ್ದಾರೆ. ತುಮಕೂರು ಜಿಲ್ಲೆಯ 9 ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಿ ಹಾಸನ ಜಿಲ್ಲೆಯ ಬಗ್ಗೆ ನಿರ್ಲಕ್ಷೃ ತಾಳಿದ್ದಾರೆ. ಹೇಮಾವತಿ ಜಲಾಶಯದ ಹೆಚ್ಚಿನ ಪ್ರಮಾಣದ ನೀರನ್ನು ತಮ್ಮ ಜಿಲ್ಲೆಗೆ ಹರಿಸಿಕೊಳ್ಳುವ ಮೂಲಕ ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೂ ತೊಂದರೆಯುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಉಳುಮೆ ಮಾಡಿದ್ದ ಶೇ.20ರಷ್ಟು ಭೂಮಿಯಲ್ಲಿ ಬಿತ್ತನೆ ಮಾಡಲು ರೈತರಿಗೆ ಸಾಧ್ಯವಾಗಿಲ್ಲ. ಸುರಿದ ಅಲ್ಪ ಪ್ರಮಾಣ ಮಳೆಯನ್ನು ಆಶ್ರಯಿಸಿ ಬಿತ್ತನೆ ಮಾಡಿದ್ದ ಶೇ.80 ರಷ್ಟು ಬೆಳೆ ಒಣಗಿ ಹೋಗಿವೆ. ಜಿಲ್ಲೆಯಾದ್ಯಂತ ದನ-ಕರುಗಳಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ, ಜಾನುವಾರುಗಳ ಮೇವಿಗೂ ತೊಂದರೆ ಎದುರಾಗುವ ಸ್ಥಿತಿ ನಿರ್ಮಾಣವಾಗಿದೆ.
ಸಾಲ ಮಾಡಿ ಬಿತ್ತನೆ ಮಾಡಿರುವ ರೈತರಿಗೆ ದಿಕ್ಕು ತೋಚದಂತಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಹಿತ ಕಾಯುವಲ್ಲಿ ಜಿಲ್ಲಾ ಆಡಳಿತ ಸಂಪೂರ್ಣ ವಿಫಲಗೊಂಡಿದೆ. ನೈಜ ವರದಿಯನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ನಿರ್ಲಕ್ಷೃ ವಹಿಸಿದ್ದು, ಶೇ.80 ರಷ್ಟು ಬೆಳೆ ನಾಶಗೊಂಡಿದ್ದರೂ, ಕೇವಲ ಶೇ.50 ರಷ್ಟು ಬೆಳೆ ನಾಶಗೊಂಡಿದೆ ಎಂದು ಸರ್ಕಾರಕ್ಕೆ ತಪ್ಪು ವರದಿ ನೀಡುವ ಮೂಲಕ ಜಿಲ್ಲೆಯ ಅರಕಲಗೂಡು ಒಂದು ತಾಲೂಕನ್ನು ಮಾತ್ರ ತೀವ್ರ ಬರಪೀಡಿತ ಪಟ್ಟಿಗೆ ಹಾಗೂ ಸಕಲೇಶಪುರ, ಚನ್ನರಾಯಪಟ್ಟಣ, ಬೇಲೂರು, ಹೊಳೆನರಸೀಪುರ ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕು ಪಟ್ಟಿಗೆ ಸೇರಿಸಿ, ಉಳಿದ ತಾಲೂಕುಗಳನ್ನು ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯೆ ಪ್ರವೇಶಿಸಿ, ಮರುಸಮೀಕ್ಷೆ ನಡೆಸಿ ತೀವ್ರ ಬರಪಟ್ಟಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸೇರಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಯಾವುದೇ ಕಾರ್ಯಕ್ರಮಗಳು ನಡೆಯಲು ಬಿಡುವುದಿಲ್ಲ. ಅಲ್ಲದೆ ಉಸ್ತುವಾರಿ ಸಚಿವರ ಜಿಲ್ಲೆ ಪ್ರವೇಶ ಮಾಡದಂತೆ ಘೇರಾವ್ ಹಾಕಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕರವೇ ಪದಾಧಿಕಾರಿಗಳಾದ ಹೇಮಾಂತ್ ಕುಮಾರ್, ಚಂದ್ರಶೇಖರ್, ನಟರಾಜ್, ಸೀತಾರಾಮ್, ರಘು ಪಾಳ್ಯ ಹಾಜರಿದ್ದರು.