ಧಾರವಾಡ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್ 19 ಪ್ರಕರಣ ಏರಿಕೆಯಾಗುತ್ತಿರುವುದು 2ನೇ ಅಲೆಯ ಅಪಾಯ ಸೂಚಿ ಸುತ್ತಿದೆ. ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿ ಸೂಚನೆಯಂತೆ ಜಿಲ್ಲೆಯಾದ್ಯಂತ ಮುಂಬರುವ ಎಲ್ಲ ಜಾತ್ರೆ, ಉರುಸು ರದ್ದುಗೊಳಿಸಲಾಗಿದೆ. ಮಾಸ್ಕ್ ಧರಿಸದ, ಪರಸ್ಪರ ಅಂತರ ಕಾಪಾಡದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮದುವೆ, ಸಾಮಾಜಿಕ, ಧಾರ್ವಿುಕ, ರಾಜಕೀಯ ಆಚರಣೆಗಳಿಗೆ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಕೋವಿಡ್ ನಿಯಂತ್ರಣದ ತಾಂತ್ರಿಕ ಮತ್ತು ತಜ್ಞರ ಸಲಹಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ನಡೆಸಿದ ವಿಡಿಯೋ ಸಂವಾದದ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ನಿರ್ದೇಶನಗಳನ್ನು ನೀಡಿದರು.
2020ರ ಈ ದಿನಗಳಲ್ಲಿ ಇದ್ದ ಕೋವಿಡ್ ಪರಿಸ್ಥಿತಿ ಈಗ ಮತ್ತೆ ನಿರ್ವಣವಾಗಿದೆ. ಮುನ್ನೆಚ್ಚರಿಕೆ ಹಾಗೂ ಲಸಿಕಾ ಕಾರ್ಯ ತೀವ್ರಗೊಳಿಸಬೇಕು. ಜಿಲ್ಲೆಯ ಎಲ್ಲ ತಹಸೀಲ್ದಾರರು ಎಚ್ಚರ ವಹಿಸಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಆಚರಣೆಗಳು ಹಾಗೂ ಸಮಾರಂಭಗಳಲ್ಲಿ ಪ್ರತಿ ವ್ಯಕ್ತಿಗೆ 3.25 ಚದರ ಮೀಟರ್ ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಬೇಕು. ಮದುವೆಗಳಿಗೆ ತೆರೆದ ಪ್ರದೇಶದಲ್ಲಿ 500, ಒಳಾಗಂಣದಲ್ಲಿ 200 ಜನರಿಗೆ ಮಾತ್ರ ಅವಕಾಶವಿದೆ. ಅದಕ್ಕೆ ಪೂರ್ವಾನುಮತಿ ಕಡ್ಡಾಯ ಎಂದು ತಿಳಿಸಿದರು.
ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ್ ಜಿ.ಪಂ. ಸಿಇಒ ಡಾ. ಬಿ. ಸುಶೀಲಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ಕೃಷ್ಣಕಾಂತ್, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, ಡಾ. ಯಶವಂತ ಮದಿನಕರ, ಡಾ. ಎಸ್.ಕೆ. ಮಾನಕರ ಇತರರಿದ್ದರು.
ಕೋವಿಡ್ ತಪಾಸಣೆ, ಲಸಿಕೆ ಕಡ್ಡಾಯ ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕಿತರು, ಅವರ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸುವ ಕಾರ್ಯ ಮತ್ತೆ ತೀವ್ರವಾಗಬೇಕು. ಜಿಲ್ಲೆಯಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಲಭ್ಯ ಇವೆ. ಸಾರ್ವಜನಿಕರು ತಮ್ಮ ಇಚ್ಛೆ ಅನುಸಾರ ಲಸಿಕೆಗಳನ್ನು ಪಡೆಯಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಎರಡೂ ಲಸಿಕೆಗಳನ್ನು ಪ್ರತ್ಯೇಕವಾಗಿ ನೀಡುವ ವ್ಯವಸ್ಥೆ ಮಾಡಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿ ಡಂಗುರ ಸಾರಿ ಜನಜಾಗೃತಿ ಮೂಡಿಸಬೇಕು. ವಿವಿಧ ಯೋಜನೆಗಳಲ್ಲಿ ಮಾಸಾಶನ ಪಡೆಯುತ್ತಿರುವ 60 ವರ್ಷ ಮೇಲ್ಪಟ್ಟವರು ಹಾಗೂ ನಿವೃತ್ತ ನೌಕರರಿಗೆ ಲಸಿಕೆ ಕಡ್ಡಾಯವಾಗಿದೆ ಎಂದರು.
ಪರಿಶೀಲನಾ ಅಧಿಕಾರಿಗಳ ನೇಮಕ: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಹಾಗೂ 45 ವರ್ಷ ಮೇಲ್ಪಟ್ಟ ಕೊ- ಮಾರ್ಬಿಡಿಟಿ ಲಕ್ಷಣಗಳಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಲಸಿಕೆ ಹಾಕಿಸಬೇಕು. ಇದಕ್ಕಾಗಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿಗಳು ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿ ಪರಿಶೀಲನಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಆದೇಶ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.