ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ 250 ಗಿಡಗಳನ್ನು ನೆಡುವ ಕಾರ್ಯಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಸಿ.ಎಂ.ವೆಂಕಟೇಶ್, ಪ್ರೊ.ಪಿ.ಮಾದೇಶ, ಎಸ್.ಬಾಲರಾಜು, ಪ್ರೊ.ಚಂದ್ರಶೇಖರ್, ಪ್ರತಾಪ್ ಇತರರು ಇದ್ದರು. 
ಜಿಲ್ಲೆ

ಜಿಲ್ಲೆಯ ಅಭಿವೃದ್ಧಿಗೆ ಎಚ್‌ಎಸ್‌ಎಂ ಕೊಡುಗೆ ಅಪಾರ

ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿಗೆ ದಿವಂಗತ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಕೊಡುಗೆ ಅಪಾರ. ಅವರು ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಸ್ನಾತಕೋತ್ತರ ಕೇಂದ್ರ ತೆರೆಯಲು ಅನುದಾನ ತಂದುಕೊಟ್ಟರು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸ್ಮರಿಸಿದರು.

ನಗರದ ನಂಜನಗೂಡು ರಸ್ತೆಯಲ್ಲಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ 250 ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು ಮುಖ್ಯ ರಸ್ತೆಯಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರಲು 1 ಕಿ.ಮೀ. ನಡೆಯಬೇಕು. ಮಧ್ಯದಲ್ಲಿ ನಿಲ್ಲಲು ನೆರಳಿಗೆ ಒಂದು ಮರವೂ ಇಲ್ಲ. ಇದಕ್ಕಾಗಿ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಅವರು ರಸ್ತೆಯ ಬದಿಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಸಾಲು ಗಿಡಗಳಿಗೆ ನೀರು ಹಾಕುವ ಮುಖಾಂತರ ಗಿಡಗಳನ್ನು ಬೆಳೆಸಲು ಅವರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಯಾವುದೇ ವಿಶ್ವವಿದ್ಯಾಲಯಗಳು ಕನಿಷ್ಠ 100 ಎಕರೆ ಇರುವ ಜಾಗವನ್ನು ಹೊಂದಿರಬೇಕು. ಇದಕ್ಕೆ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕು. ಈ ಎಲ್ಲ ಸೌಲಭ್ಯಗಳಿಗೆ 200 ಕೋಟಿ ರೂ. ಬೇಕಾಗುತ್ತದೆ. ಇದನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

ಈಶ್ವರಿ ಸೋಷಿಯಲ್ ಟ್ರಸ್ಟ್ ಸಂಸ್ಥಾಪಕ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಮಾತನಾಡಿ, ನಮ್ಮ ಸಂಸ್ಥೆಗೆ 6 ವರ್ಷಗಳು ತುಂಬಿದೆ. ಜಿಲ್ಲೆಯಲ್ಲಿ ನಗರ ಪ್ರದೇಶಗಳನ್ನು ಹಸಿರುಮಯ ಮಾಡುವ ಉದ್ದೇಶದಿಂದ ನಮ್ಮ ಪ್ರಯತ್ನ ಸಾಗಿದೆ. ಈ ನಮ್ಮ ಕಾರ್ಯಕ್ಕೆ ಜಿಲ್ಲೆಯ ಪರಿಸರ ಆಸಕ್ತರು ಸಹಕಾರ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು. ಕಾಲೇಜು ಆವರಣವನ್ನು ಸ್ವಚ್ಛವಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ನಿರ್ದೇಶಕ ಪ್ರೊ.ಪಿ.ಮಾದೇಶ, ಮಾಜಿ ಶಾಸಕ ಎಸ್.ಬಾಲರಾಜು, ಮೈಸೂರು ವಿಶ್ವವಿದ್ಯಾಲಯ ಡೀನ್ ಪ್ರೊ. ಚಂದ್ರಶೇಖರ್, ಇಂಜಿನಿಯರ್ ಪ್ರತಾಪ್, ಸಹಾಯಕ ಇಂಜಿನಿಯರ್ ರೂಪಾ, ಪ್ಯಾಧ್ಯಾಪಕ ಮಹೇಶ್, ನಂದಕುಮಾರ್, ಎನ್.ಎಸ್.ಎಸ್. ವಿದ್ಯಾರ್ಥಿಗಳು ಇತರರು ಹಾಜರಿದ್ದರು.