filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.44833365, 0.43767858);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46; 
ಜಿಲ್ಲೆ

ಜಿಲ್ಲೆಯ 7 ಕಡೆ ಏಳು ದಿನವೂ ವಿಶೇಷ ಕಾರ್ಯಕ್ರಮ

ಚಿತ್ರದುರ್ಗ: ದೇಶಾದ್ಯಂತ 71ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ನ. 14ರಿಂದ 20ರವರೆಗೆ ಆಚರಿಸುತ್ತಿದ್ದು, ಜಿಲ್ಲೆಯ 7 ಕಡೆಗಳಲ್ಲೂ ಏಳು ದಿನ ಸಹಕಾರಿ ತತ್ವದಡಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ.ದ್ಯಾಮಣ್ಣ ಕೋಗುಂಡೆ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಬಾರಿಯ ಸಪ್ತಾಹ ಆಚರಿಸಲಾಗುತ್ತಿದೆ. 14ರಂದು ಬೆಳಗ್ಗೆ 10ಕ್ಕೆ ಚಿತ್ರದುರ್ಗದ ಕೆಳಗೋಟೆಯ ಬಿ.ಎಲ್.ಗೌಡ ಲೇಔಟ್‌ನ ಸಹಕಾರ ಭವನ ಆವರಣದಲ್ಲಿ ಸಹಕಾರ ಧ್ವಜಾರೋಹಣದೊಂದಿಗೆ ಚಾಲನೆ ದೊರೆಯಲಿದೆ ಎಂದರು.

ರಾಜ್ಯಮಟ್ಟದ ಕಾರ್ಯಕ್ರಮವನ್ನು 15ರಂದು ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತವೆಂಬ ತತ್ವದೊಂದಿಗೆ ಆಚರಿಸಲಾಗುವುದು ಎಂದು ತಿಳಿಸಿದರು.

ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಧ್ವಜಾರೋಹಣ ನೆರವೇರಿಸುವರು. ಆವರಣದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಸಂಸದ ಗೋವಿಂದ ಎಂ.ಕಾರಜೋಳ ಚಾಲನೆ ನೀಡುವರು. ಸಹಕಾರ ವಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ, ಶಾಸಕ ಜಿ.ಟಿ.ದೇವೆಗೌಡ ಬಿಡುಗಡೆ ಮಾಡುವರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಶಾಸಕರು, ಎಂಎಲ್ಸಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಅನುಪಮ ಸೇವೆಗೈದ 6 ಹಿರಿಯ ಸಹಕಾರಿಗಳಿಗೆ, 6 ಸಹಕಾರಿ ಸಂಘಗಳಿಗೆ ಸನ್ಮಾನಿಸಲಾಗುವುದು. ರಾಜ್ಯಮಟ್ಟದ ಸಂಸ್ಥೆಗಳ ಅಧ್ಯಕ್ಷರು, ಗಣ್ಯರು, ಇಲಾಖೆಯ ಎಲ್ಲ ಅಧಿಕಾರಿಗಳು, ನಮ್ಮ ಸಂಘಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ತಾಲೂಕು ಕೇಂದ್ರಗಳಲ್ಲೂ ಆಚರಣೆ: 14ರಂದು ಹೊಳಲ್ಕೆರೆ ಪಟ್ಟಣದ ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ, 16ರಂದು ಹೊಸದುರ್ಗ ಪಟ್ಟಣದ ಜಯದೇವ ಕಲ್ಯಾಣ ಮಂಟಪ, 17ರಂದು ಚಳ್ಳಕೆರೆ ಕಂಬಳಿ ಮಾರುಕಟ್ಟೆ ಭವನ, ಕ್ರಮವಾಗಿ 18ಕ್ಕೆ ಮೊಳಕಾಲ್ಮೂರು ತಾಲೂಕಿನ ರಾಂಪುರ, 19ಕ್ಕೆ ಹಿರಿಯೂರು ತಾಲೂಕಿನ ಆರನಕಟ್ಟೆ ಪಿಎಸಿಎಸ್ ಆವರಣ, 20ರಂದು ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಪಿಎಸಿಎಸ್ ಮತ್ತು ಎಂಪಿಸಿಎಸ್ ಆವರಣದಲ್ಲಿ ಆಚರಿಸಲಾಗುವುದು ಎಂದರು.

ಸಪ್ತಾಹದಲ್ಲಿ ಸಹಕಾರ ಚಳವಳಿಯ ಸಾಧನೆ, ವೈಪಲ್ಯ ಹಾಗೂ ಮುಂದಿನ ಗುರಿಗಳ ಕುರಿತು ಚರ್ಚಿಸಲಾಗುವುದು. ಇದಕ್ಕಾಗಿ ಚರ್ಚೆ, ಸಮಾಲೋಚನೆ, ವಿಚಾರ ಸಂಕೀರಣ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.

ರಾಜ್ಯ ಮಂಡಳಿಯ ನಿರ್ದೇಶಕ ರಾಮರೆಡ್ಡಿ ಮಾತನಾಡಿ, ರಾಜ್ಯದಲ್ಲಿ 45 ಸಾವಿರಕ್ಕೂ ಹೆಚ್ಚಿನ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. 1.5 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಮಹಾಮಂಡಳದಿಂದ ರಾಜ್ಯಾದ್ಯಂತ 8 ತರಬೇತಿ ಕೇಂದ್ರ ತೆರೆಯಲಾಗಿದ್ದು, ಇಲ್ಲಿ ಪಿಯುಸಿ ಪೂರೈಸಿದ ವಿದ್ಯಾರ್ಥಿಗಳಿಗೆ ಸಹಕಾರಿ ಕ್ಷೇತ್ರದ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಹಕಾರಿ ವಿಷಯ ಪಠ್ಯವಾಗಲಿ: ಸಹಕಾರಿ ದೊಡ್ಡಮಟ್ಟದಲ್ಲಿ ಪಸರಿಸಿದ್ದು, ರಾಜ್ಯದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಘಗಳ ಕುರಿತು ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸಹಕಾರಿ ವಿಷಯವನ್ನು ಪಠ್ಯವಾಗಿಸಬೇಕು. ಸಮಾಜದಲ್ಲಿ ವೈದ್ಯರು, ಇಂಜಿನಿಯರ್‌ಗಳಂತೆ ಕ್ಷೇತ್ರಕ್ಕೂ ಪರಿಣಿತರ ಅವಶ್ಯಕತೆ ಇದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ರಾಮರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ಇಲ್ಯಾಸ್ ಉಲ್ಲಾ ಷರೀಫ್, ಸಹಕಾರಿ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್ ಕುಮಾರ್, ಸಹಾಯಕ ನಿಬಂಧಕ ಬಾಹುಬಲಿ ಹಂಜೆ ಇತರರಿದ್ದರು.