ಚಿತ್ರದುರ್ಗ: ಜಿಲ್ಲೆಯ ಆರು ತಾಲೂಕಿನ ಹಲವು ವಿದ್ಯುತ್ ವಿತರಣಾ ಕೇಂದ್ರಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ನಿರ್ವಹಣೆ ಸಂಬಂಧ 21 ಕಡೆ ಉಪ ಕೇಂದ್ರಗಳನ್ನು ನಿರ್ಮಿಸಲು ಅನುದಾನ ಒದಗಿಸಿ, ಪ್ರಸಕ್ತ ವರ್ಷವೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ಚಿತ್ರದುರ್ಗ ತಾಲೂಕಿನ ಅಜ್ಜಪ್ಪನಹಳ್ಳಿಯಲ್ಲಿ 220/66/11ಕೆವಿ ನೂತನ ವಿದ್ಯುತ್ ಉಪಕೇಂದ್ರದ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇಲ್ಲಿನ ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಅವಧಿ ನಿಗದಿಯಾಗಿದ್ದು, ಗುತ್ತಿಗೆದಾದರು ವರ್ಷದೊಳಗೆ ಪೂರ್ಣಗೊಳಿಸುವ ಉತ್ಸಾಹದಲ್ಲಿದ್ದಾರೆ. ಹೀಗಾಗಿ ರೈತರ ಪಂಪ್‌ಸೆಟ್‌ಗಳಿಗೆ ಬಹುಬೇಗ ನಿರಂತರ ವಿದ್ಯುತ್ ಲಭಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಇಂಧನ ಇಲಾಖೆಯಲ್ಲಿ ಹಲವು ಸುಧಾರಣೆ ತಂದಿದೆ. ಸಚಿವ ಕೆ.ಜೆ.ಜಾರ್ಜ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವೆಡೆ ರೈತರಿಗೆ ಯಾವುದೇ ಅಡಚಣೆ ಇಲ್ಲದೇ ವಿದ್ಯುತ್ ನೀಡಲಾಗುತ್ತಿದೆ ಎಂದರು.
ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗದು: ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ಸಾಕಷ್ಟು ಅನುಕೂಲವಾಗಿವೆ. ದೇಶದಲ್ಲಿ ಜನೋಪಯೋಗಿ ಕೆಲಸಗಳನ್ನು ಕೊಡುಗೆಯಾಗಿ ನೀಡಿದ ಏಕೈಕ ಪಕ್ಷ ಕಾಂಗ್ರೆಸ್. ಗ್ಯಾರಂಟಿಯಿಂದ ದಿವಾಳಿ ಎಂಬ ಸಂಸದ ಗೋವಿಂದ ಎಂ.ಕಾರಜೋಳ ಅವರ ಟೀಕೆ ಸತ್ಯಕ್ಕೆ ದೂರ ಎಂದು ಡಿ.ಸುಧಾಕರ್ ಹೇಳಿದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಸಿರಿಗೆರೆ ಶ್ರೀಗಳ ಕಾಳಜಿಯಿಂದಾಗಿ 660 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯಿಂದ ಈ ಭಾಗದ 46 ಕೆರೆಗಳಿಗೆ ನೀರು ಹರಿಸಿದ್ದು, ಭರ್ತಿಯಾಗಿವೆ. ಇದರಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ಕೊಳವೆಬಾವಿಗಳು ಮರುಪೂರಣಗೊಂಡು ನಳನಳಿಸುತ್ತಿವೆ ಎಂದರು.
ರೈತರಿಗೆ ಮೂಲಸೌಕರ್ಯ ಕಲ್ಪಿಸಿದರೆ, ಅವರೆಲ್ಲ ಸಾಲ ಪಡೆಯುವ, ಸರ್ಕಾರ ಸಾಲ ಮನ್ನಾ ಮಾಡುವ ಅಗತ್ಯ ಬರುವುದಿಲ್ಲ. ಬದಲಿಗೆ ಸರ್ಕಾರಕ್ಕೆ ಸಾಲ ನೀಡುವಷ್ಟು ಸಮರ್ಥರಾಗುತ್ತಾರೆ. ಹೀಗಾಗಿ ಪಂಪ್‌ಸೆಟ್‌ಗಳಿಂದ ಜಮೀನಿಗೆ ನೀರು ಹರಿಸಲು ವಿದ್ಯುತ್ ಅಭಾವ ಉಂಟಾಗುವುದನ್ನು ಮನಗಂಡು ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಜ್ಜಪ್ಪನಹಳ್ಳಿಯಲ್ಲಿ ಉಪಕೇಂದ್ರ ನಿರ್ಮಾಣವಾದಲ್ಲಿ 80 ಹಳ್ಳಿಗಳ ಜಮೀನುಗಳಿಗೆ ನಿರಂತರ ವಿದ್ಯುತ್ ಲಭಿಸಲಿದೆ. ಹೀಗಾಗಿ ಗುತ್ತಿಗೆದಾರರು ಮುಂದಿನ ಗಣರಾಜ್ಯೋತ್ಸವ ದಿನದಂದು ಉದ್ಘಾಟಿಸಲು ತೀರ್ಮಾನಿಸಿರುವ ಈ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಿ. ಹೊಲಗಳಲ್ಲಿ ವಿದ್ಯುತ್ ಲೈನ್‌ಗಳು ಹಾದುಹೋಗುವ ಸಂಭವವಿದೆ. ಅದಕ್ಕೆ ರೈತರು ಸಹಕರಿಸಿ ಎಂದು ಮನವಿ ಮಾಡಿದರು.
ನಿರಂತರ ವಿದ್ಯುತ್ ಒದಗಿಸುವ ಗುರಿ: ಹೊಳಲ್ಕೆರೆ ತಾಲೂಕಿನಲ್ಲಿ 13.5 ಎಕರೆ ರೇಷ್ಮೆ ಇಲಾಖೆಯ ಜಮೀನನ್ನು ಇಂಧನ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಲ್ಲಿ 500 ಕೋಟಿ ರೂ. ವೆಚ್ಚದಲ್ಲಿ 400 ಕೆ.ವಿ. ವಿದ್ಯುತ್ ಸರಬರಾಜು ಕೇಂದ್ರ ನಿರ್ಮಿಸಲಾಗುವುದು. ಇದರಿಂದಾಗಿ ತಾಲೂಕಿನ 350 ಹಳ್ಳಿಗಳಿಗೆ ನಿರಂತರ ವಿದ್ಯುತ್ ಪೂರೈಸುವ ಗುರಿ ಹೊಂದಲಾಗಿದೆ ಎಂದು ಡಾ.ಎಂ.ಚಂದ್ರಪ್ಪ ಹೇಳಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧೀಕ್ಷಕ ಇಂಜಿನಿಯರ್ ಜಿ.ಎಂ.ರೇವಣಸಿದ್ದಪ್ಪ ಮಾತನಾಡಿ, 108 ಕೋಟಿ ರೂ. ವೆಚ್ಚದಲ್ಲಿ ಈ ಉಪಕೇಂದ್ರ ನಿರ್ಮಿಸಲಾಗುವುದು. 27.5 ಕಿ.ಮೀ ಉದ್ದ ಜೋಡಿ ವಿದ್ಯುತ್ ಲೈನ್, ಆರು ಹೊಸ ಮಾರ್ಗ ಕೂಡ ನಿರ್ಮಾಣ ಆಗಲಿದೆ. ಭರಮಸಾಗರ, ಸಿರಿಗೆರೆ, ಬಿದರಿಕೆರೆ, ಸೊಕ್ಕೆ, ಮಾಡನಾಯಕನಹಳ್ಳಿ ಸೇರಿ ಇನ್ನಿತರೆ ವಿದ್ಯುತ್ ಕೇಂದ್ರಗಳ ಸಾಮರ್ಥ್ಯ ಹೆಚ್ಚಾಗಲಿದೆ. ಇದರಿಂದ ತಡೆರಹಿತ ಪೂರೈಕೆಗೂ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ನಿಗಮದ ಕಾರ್ಯಾಚರಣೆ ಮುಖ್ಯ ಇಂಜಿನಿಯರ್ ಬಿ.ಎನ್. ಸತ್ಯನಾರಾಯಣ, ಯಳಗೋಡು ಗ್ರಾಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ನಿರ್ಮಲಮ್ಮ, ಸದಸ್ಯರಾದ ಬಸಮ್ಮ, ಬಸವರಾಜಪ್ಪ, ಪಾರ್ವತಮ್ಮ, ಎನ್.ಎಂ.ಶಾಂತಕುಮಾರ್, ಎಚ್.ಹನುಮಂತಪ್ಪ, ರೂಪಾ, ಕೆ.ಎಸ್.ರುದ್ರೇಶ್, ರಹಮತ್‌ಉಲ್ಲಾ, ಮಹಮದ್ ಮುಬಾರಕ್, ಕವಿತಾ, ಎಸ್.ಪಾಲಯ್ಯ, ಪಿಡಿಒ ಪ್ರಹ್ಲಾದ್, ಜಿಪಂ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಮುಖಂಡರಾದ ಕೋಗುಂಡೆ ಮಂಜಣ್ಣ, ಶೈಲೇಶ್, ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಪದ್ಮಶ್ರೀ, ಲಕ್ಷ್ಮೀ, ತಿಮ್ಮರಾಯಪ್ಪ, ಸಚಿನ್ ಚಕ್ರವರ್ತಿ, ಆರ್.ರಮೇಶ್, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.