ಜಿಲ್ಲೆ

ಜಿಲ್ಲೆಗೆ ಶೀಘ್ರ ವಿದ್ಯುತ್ ರೈಲು ಸಂಚಾರ:ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣ

Chikkaballapur

ಚಿಕ್ಕಬಳ್ಳಾಪುರ: ಯಲಹಂಕ ಮತ್ತು ಚಿಕ್ಕಬಳ್ಳಾಪುರ ಮಾರ್ಗದವರೆಗೆ ರೈಲ್ವೆ ವಿದ್ಯುದ್ದೀಕರಣ ಲೈನ್ ಕಾಮಗಾರಿ ಬಹುತೇಕ ಮುಗಿದಿದ್ದು, ಈ ಭಾಗದಲ್ಲಿ ತ್ವರಿತವಾಗಿ ವಿದ್ಯುತ್ ಇಂಜಿನ್ ರೈಲು ಸಂಚರಿಸುವ ನಿರೀಕ್ಷೆ ಮೂಡಿದೆ.ಈಗಾಗಲೇ ಪ್ರಾಯೋಗಿಕವಾಗಿ ವಿಶೇಷ ಇಂಜಿನ್ ರೈಲು ಸಂಚಾರದ ಮೂಲಕ ಸುಗಮ ಸಂಚಾರವನ್ನು ದೃಢಪಡಿಸಿಕೊಳ್ಳಲಾಗುತ್ತಿದೆ. ಎಲ್ಲವೂ ಸುಸುವ್ಯವಸ್ಥೆಯಿಂದ ಕೂಡಿದೆ ಎಂಬುದು ತಿಳಿದು ಬಂದಿದೆ. ಇನ್ನು 1 ವಾರದಲ್ಲಿ ರೈಲ್ವೆ ಸುರಕ್ಷತಾ ಪರಿಶೀಲನಾ ತಂಡವು ಆಗಮಿಸಿ, ಮಾರ್ಗ ವೀಕ್ಷಿಸಲಿದ್ದು, ಇದರ ವರದಿಯಾಧಾರದ ಮೇಲೆ ಸಂಚಾರ ಪ್ರಾರಂಭವಾಗಲಿದೆ.

ಯಲಹಂಕದಿಂದ ದೇವನಹಳ್ಳಿ, ನಂದಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಮತ್ತು ಕೋಲಾರದ ಮೂಲಕ ಬಂಗಾರಪೇಟೆಯ ಜಂಕ್ಷನ್ ವರೆಗಿನ 124 ಕಿ.ಮೀ ಉದ್ದದ ವಿದ್ಯುದ್ದೀಕರಣ ಕಾಮಗಾರಿಗೆ ಯೋಜನೆ ರೂಪಿಸಲಾಗಿತ್ತು. ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ನಿಲುಗಡೆಗೊಂಡಿದ್ದ ಸಂದರ್ಭದಲ್ಲಿ ಕೆಲಸಕ್ಕೆ ಚಾಲನೆ ನೀಡಿದ್ದು, ಇದರಲ್ಲಿ ಯಲಹಂಕ ಮತ್ತು ಚಿಕ್ಕಬಳ್ಳಾಪುರದ ನಡುವೆ ಗ್ರೌಂಡ್ ಅರ್ಥಿಂಗ್, ಹಳಿ ಲೈನ್‌ಗಾಗಿ ವಿದ್ಯುತ್ ಕಂಬ ಅಳವಡಿಕೆ ಸೇರಿ ಅಗತ್ಯ ಕಾಮಗಾರಿ ಮುಗಿದಿದೆ. ಇದಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ, ಹೆಚ್ಚಿಗೆ ಪ್ರಯಾಣಿಕರು ಸಂಚರಿಸುವ ಈ ಮಾರ್ಗದಲ್ಲಿ ಮೊದಲು ವಿದ್ಯುತ್ ಆಧಾರಿತ ರೈಲನ್ನು ಓಡಿಸಲು ಚಿಂತಿಸಲಾಗಿದೆ. ಇನ್ನು ಉಳಿದೆಡೆ ಸಹ ಕಾಮಗಾರಿ ಬರದಿಂದ ನಡೆಯುತ್ತಿದೆ. ಇದು ಮುಗಿದ ಬಳಿಕ ಪೂರ್ಣ ಮಾರ್ಗದಲ್ಲಿ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ರೈಲ್ವೆ ಸೌಕರ್ಯ ಹೆಚ್ಚಳ ನಿರೀಕ್ಷೆ: ಹೂವು ಹಣ್ಣ, ತರಕಾರಿ, ಹಾಲು, ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ರೈಲ್ವೆ ಸೌಕರ್ಯ ಹೆಚ್ಚಾಗಬೇಕು. ಪ್ರಯಾಣಿಕರು ಮತ್ತು ಉತ್ಪನ್ನಗಳ ಸಾಗಾಣೆಗೆ ಒಳ್ಳೆಯ ಸೇವೆ ಸಿಗಬೇಕು. ಪ್ರಸ್ತುತ ಕೋಲಾರ, ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ನಿಗದಿತ ಸಮಯದಲ್ಲಿ ಎರಡು ರೈಲು ಸಂಚರಿಸುತ್ತಿವೆ.

ಹೆಚ್ಚು ಲಾಭದಾಯಕ: ಪ್ರಸ್ತುತ ಇಲ್ಲಿ ಡಿಸೇಲ್ ಇಂಜಿನ್ ರೈಲು ಸಂಚರಿಸುತ್ತಿದೆ. ಇದು ಚಾಲನೆಯ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಕಾರಕವಾದ ಹೆಚ್ಚಿನ ಹೊಗೆಯನ್ನು ಹೊರಸೂಸುತ್ತದೆ. ಇದರ ನಡುವೆ ಕೇಂದ್ರ ಸರ್ಕಾರವು ಮಾಲಿನ್ಯವನ್ನು ತಪ್ಪಿಸುವ ಉದ್ದೇಶದಿಂದ ಬಹುತೇಕ ರೈಲ್ವೆ ಹಳಿ ಮಾರ್ಗ ವಿದ್ಯುದ್ದೀಕರಣಗೊಳಿಸುತ್ತಿದೆ. ಇದು ಹೊಗೆ ರಹಿತ, ನವೀಕರಿಬಹುದಾದ ಇಂಧನ ಬಳಕೆ, ಎಂಜಿನ್ ಕ್ಷಮತೆ ಹೆಚ್ಚಳ, ಪರಿಸರ ಸ್ನೇಹಿ ಸೇರಿ ನಾನಾ ರೀತಿಯಲ್ಲಿ ಹೆಚ್ಚು ಲಾಭದಾಯಕ.

ಕೋಲಾರ ಮತ್ತು ಬಂಗಾರಪೇಟೆ ರೈಲ್ವೆ ಜಂಕ್ಷನ್‌ವರೆಗಿನ ಉದ್ದೇಶಿತ ರೈಲ್ವೆ ವಿದ್ಯುದ್ದೀಕರಣ ಲೈನ್ ಕಾಮಗಾರಿ ಪೈಕಿ ಯಲಹಂಕದಿಂದ ಚಿಕ್ಕಬಳ್ಳಾಪುರದ ನಡುವೆ ಕೆಲಸ ಬಹುತೇಕ ಮುಗಿದಿದೆ. ಸುರಕ್ಷತಾ ಸಂಚಾರ ಪರಿಶೀಲನೆ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು ಗ್ರೀನ್ ಸಿಗ್ನಲ್ ವರದಿ ನೀಡಿದ ಬಳಿಕ ವಿದ್ಯುತ್ ಚಾಲಿತ ರೈಲು ಸಂಚರಿಸುತ್ತದೆ. ಹೆಸರು ಹೇಳಲು ಇಚ್ಛಿಸದ ಅಧಿಕಾರಿ, ರೈಲ್ವೆ ಇಲಾಖೆ ***** ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಯಲ್ಲಿ ರೈಲ್ವೆ ಸೌಕರ್ಯ ಹೆಚ್ಚಾಗಬೇಕು. ಇದರ ಭಾಗವಾಗಿ ಈ ಮಾರ್ಗದಲ್ಲಿ ರೈಲ್ವೆ ವಿದ್ಯುದ್ದೀಕರಣ ಲೈನ್ ಕಾಮಗಾರಿ ಅಳವಡಿಕೆ, ವಿದ್ಯುತ್ ಚಾಲಿತ ರೈಲು ಸಂಚಾರ ಶ್ಲಾಘನೀಯ. ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಜನರಿಗೆ ಅಗತ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಕಿರಣ್, ಸ್ಥಳೀಯ ನಿವಾಸಿ, ಚಿಕ್ಕಬಳ್ಳಾಪುರ