ಹಾಸನ : ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಕೊಡುಗೆ ಅಪಾರ, ಕೋಟ್ಯಂತರ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಅವುಗಳ ಪಟ್ಟಿ ಮಾಡಿ ಪುಸ್ತಕದ ರೂಪದಲ್ಲಿ ಹೊರತರಲಾಗಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಅವರು ಹೇಳಿದರು.
ಜೆಡಿಎಸ್ ಅವಧಿಯಲ್ಲಿ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಪುಸ್ತಕವನ್ನು ನಗರದ ಸಂಸದರ ನಿವಾಸದಲ್ಲಿ ಸೋಮವಾರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಹಾಸನ - ಬೆಂಗಳೂರು ಹೊಸ ರೈಲು ಮಾರ್ಗ, ಹಾಸನ- ಮೈಸೂರು ರೈಲು ಮಾರ್ಗ, ವಿಮಾನ ನಿಲ್ದಾಣ, ಹೈಟೆಕ್ ಸರ್ಕಾರಿ ಜಿಲ್ಲಾಸ್ಪತ್ರೆ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದೆ ಎಂದರು.
ರೈಲ್ವೆ ಮೇಲ್ಸೇತುವೆ, ಹಾಸನ ದುದ್ದ, ಗಂಡಸಿ ಚತುಷ್ಪಥ ರಸ್ತೆ, ಮೈಸೂರು - ಹೊಳೆನರಸೀಪುರ, ಹಾಸನ - ಬೇಲೂರು ರಾಷ್ಟ್ರೀಯ ಹೆದ್ದಾರಿ, ಚನ್ನಪಟ್ಟಣ - ತಣ್ಣೀರು ಹಳ್ಳ ಚತುಷ್ಪಥ ಕಾಂಕ್ರೀಟ್ ರಸ್ತೆ , ರಿಂಗ್ ರಸ್ತೆ, 80 ಅಡಿ ರಸ್ತೆ, ಎಂ.ಸಿ.ಎಫ್ ರಸ್ತೆ, ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಬಡಾವಣೆ ನಿರ್ಮಾಣ ಮಾಡಲಾಗಿದೆ. ಹಿಮ್ಸ್ ಮೆಡಿಕಲ್ ಕಾಲೇಜು, ವಸತಿ ನಿಲಯ, ಗಂಧದ ಕೋಟೆ ಕಾಲೇಜುಗಳು, ಹಾಸನ -ಹೊಳೆನರಸೀಪುರದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು, ಕೃಷಿ ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳು, ವಿಜ್ಞಾನ ಕಾಲೇಜುಗಳು, ಡಿಪ್ಲೊಮಾ ಕಾಲೇಜುಗಳನ್ನು ನಿರ್ಮಿಸಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ನೀರಾವರಿ ಯೋಜನೆಗಳಿಗೆ ಕಾಯಕಲ್ಪ, ಮಹಿಳಾ ಸಬಲೀಕರಣ, ಕ್ರೀಡಾಂಗಣ, ಆರೋಗ್ಯ, ಸಾರಿಗೆ ವ್ಯವಸ್ಥೆ, ಕೃಷಿ, ತೋಟಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮ ವಹಿಸಿದ್ದೇವೆ. ನಾವು ಮಾಡಿದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಉದ್ಘಾಟನೆ ಮಾಡಿದೆ ಎಂದು ದೂರಿದರು.
ಹಾಸನ ಜಿಲ್ಲೆಗೆ ಬಿಜೆಪಿ ಏನಾದರೂ ಕೊಡುಗೆ ನೀಡಿದ್ದರೆ ಅದು ಎರಡು ವರ್ಷಗಳಲ್ಲಿ 150 ಸಿಎಲ್ 7 ಮದ್ಯದಂಗಡಿ ಪರವಾನಗಿ ಮಾತ್ರ. ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರಾಗಿ ಮದ್ಯದ ಅಂಗಡಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಿ ಉತ್ತಮ ಕೊಡುಗೆ ನೀಡಿದ್ದಾರೆ. ಇದೇ ಬಿಜೆಪಿಯ ಬಹುದೊಡ್ಡ ಕೊಡುಗೆ. ಇದರ ಕ್ರೆಡಿಟ್ ಸಚಿವ ಗೋಪಾಲಯ್ಯ ಅವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದರು ಕೂಡ ವಿರೋಧ ಪಕ್ಷದವರು ನಮ್ಮನ್ನು ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ. ನಾವು ತಂದಿರುವ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳ ಬಗ್ಗೆ ಇಡೀ ಜಿಲ್ಲೆಯ ಜನರು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಮುಸಲ್ಮಾನರಿಗೆ ಇದ್ದಂತಹ ಮೀಸಲಾತಿಯನ್ನು ತೆಗೆದುಹಾಕಿ ರಾಜಕೀಯ ದ್ವೇಷ ಮಾಡುತ್ತಿದ್ದಾರೆ. ಇದನ್ನು ಮುಸಲ್ಮಾನ ಬಾಂಧವರು ಅರ್ಥ ಮಾಡಿಕೊಳ್ಳಬೇಕು. ಮೋದಿ ಮತ್ತು ಅಮಿತ್ ಶಾ ಭೇಟಿ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ತಕ್ಷಣವೇ ಎಲ್ಲಾ ಮುಸ್ಲಿಮರು ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಕೆ.ಎಂ.ರಾಜೇಗೌಡ ಇದ್ದರು.