ಕಲಬುರಗಿ: ಕರೊನಾ ಹಿನ್ನೆಲೆಯಲ್ಲಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತೊಮ್ಮೆ ಜಿಲ್ಲೆಯ ಜನತೆಗೆ ಮನವಿ ಮಾಡಿರುವ ಜಿಲ್ಲಾಧಿಕಾರಿ ಬಿ. ಶರತ್ ಅವರು ನಾವೀಗ ಸಂಭ್ರಮ ಆಚರಿಸುವ ಸಮಯದಲ್ಲಿ ಇಲ್ಲ. ಇನ್ನಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಕೆಲವು ಜಿಲ್ಲೆಗಳನ್ನು ರೆಡ್ಝೋನ್ ಜಿಲ್ಲೆಗಳೆಂದು ಘೋಷಿಸಲಾಗಿದೆ. ಈ ಸಾಲಿಗೆ ಕಲಬುರಗಿ ಬರಬಾರದು. ಹೀಗಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮತ್ತು ಈಗಾಗಲೇ ಸೂಚಿಸಿರುವಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕೆಂದು ಅವರು ಬುಧವಾರ ಸುದ್ದಿಗಾರರ ಮೂಲಕ ಕೋರಿದರು.
ನಗರದಲ್ಲಿ ಗುಂಪುಗೂಡುವುದನ್ನು ತಡೆಗಟ್ಟಲು 144ನೇ ಕಲಂನ್ವಯ ಹೇರಲಾಗಿರುವ ನಿಷೇಧಾಜ್ಞೆ ಅವಧಿ 14ರವರೆಗೆ ವಿಸ್ತರಿಸಿದ್ದೇನೆ. ಕರೊನಾವನ್ನು ಜಿಲ್ಲೆಯಿಂದ ಸಂಪೂರ್ಣವಾಗಿ ಹೊಡೆದೊಡಿಸಲು ಮಿಲಿಟರಿ ಪಡೆ ಬಳಸುವ ಸಲಹೆಯೂ ಬಂದಿತ್ತು. ಆದರೆ ಸಧ್ಯಕ್ಕೆ ಕೆಎಸ್ಆರ್ಪಿ ಮತ್ತು ಸಿಎಆರ್ ಪಡೆಗಳನ್ನು ಬಳಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಎಸ್ಪಿ ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿ ಪತ್ರ ಬರೆದಿದ್ದೇನೆ ಎಂದು ಅವರು ವಿವರಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ನಾಲ್ವರಿಗೆ ಸೋಂಕು ಇದ್ದು, ಇವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನೂ ಇಬ್ಬರಿಗೆ ಗುಣಮುಖವಾಗಿದೆ. ಆ ಪೈಕಿ ಮಹಿಳೆಯೊಬ್ಬರನ್ನು ಮನೆಗೆ ಕಳಿಸಲಾಗಿದೆ. ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ವೈದ್ಯರೂ ಗುಣಮುಖರಾಗಿದ್ದು, ಅವರ ಪತ್ನಿಗೆ ಸೋಂಕು ತಗುಲಿದ್ದರಿಂದ ಅವರನ್ನು ಐಸೋಲೇಟೆಡ್ ವಾಡರ್್ದಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿದೆ.
ಇಬ್ಬರು ಗುಣಮುಖರಾಗಿದ್ದಾರೆಂದಾಕ್ಷಣ ನಾವು ಸಂಭ್ರಮ ಆಚರಿಸುವುದಲ್ಲ. ಬದಲಿಗೆ ಇದು ಮುಂದೆಯೂ ಹರಡದಂತೆ ನೋಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ದಿಲ್ಲಿಯಲ್ಲಿ ನಡೆದ ತಬ್ಲಿ ಜಮಾತ್ ಸಭೆಗೆ ಕಲಬುರಗಿಯ 26 ಜನ ಹಾಜರಾಗಿದ್ದು, ವಾಪಸ್ ಬಂದ 14 ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಒಬ್ಬರು ಹೈದರಾಬಾದಿನ ಕರೀಂನಗರದಲ್ಲಿರುವ ಮಾಹಿತಿ ಇದೆ. ಮೂವರು ಬೇರೆ ಬೇರೆ ರಾಜ್ಯದಲ್ಲಿದ್ದಾರೆ. ಅವರೆಲ್ಲ ವಾಪಸ್ಸು ಬಂದ ಮೇಲೆ ಅವರಿಗೆ ಚಿಕಿತ್ಸೆ ನೀಡಲಾಗುವುದು. ಇನ್ನೂ ಆರು ಮಂದಿ ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ವಿವರಿಸಿದರು.ತಮ್ಮ ಕುಟುಂಬದ ದೃಷ್ಟಿ ಮತ್ತು ಸಮಾಜದ ಹಿತದೃಷ್ಟಿಗೆ ಯಾರು ಯಾರು ಆ ಸಭೆಯನ್ನು ಅಟೆಂಡ್ ಮಾಡಿದ್ದೀರಿ ಅವರು ಮುಂದೆ ಬಂದು ಮಾಹಿತಿ ನೀಡಬೇಕು. ಒಬ್ಬರಿಂದ ಒಬ್ಬರಿಗೆ ಹರಡದಂತೆ ಕ್ರಮ ಕೈಗೊಳ್ಳಬೇಕಾಗಿದೆ. ನಿಮಗೆ ಬೇಕಾದ ವೈದ್ಯಕೀಯ ವ್ಯವಸ್ಥೆ ನೀಡಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಕಲಬುರಗಿಯಲ್ಲಿ ಪತ್ತೆಯಾಗಿರುವ 60 ವರ್ಷದ ಮಹಿಳೆ ಕರೊನಾದಿಂದ ಮೃತಪಟ್ಟ ಸಿದ್ದಿಕಿಯವರಿಗೆ ಚಿಕಿತ್ಸೆ ನೀಡಿದ ವೈದ್ಯನ ಪತ್ನಿಯಾಗಿದ್ದಾರೆ. ಇವರಿಗೂ ಕರೋನಾ ಸೋಂಕು ಇರುವುದು ಖಚಿತವಾಗಿದೆ. ಇವರಿಗೆ ಇಲ್ಲಿಯ ಐಸೋಲೇಟೆಡ್ ವಾಡರ್್ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಇವರ ಸೊಸೆ, ಮೊಮ್ಮಗ, ಮಗಳು ಸೇರಿ ಇನ್ನೂ ನಾಲ್ವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು. ವೃದ್ಧೆಯ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನು ಆರೋಗ್ಯ ಇಲಾಖೆಯವರು ಅರಿತುಕೊಳ್ಳುತ್ತಿದ್ದಾರೆ.
ಬಿ. ಶರತ್, ಜಿಲ್ಲಾಧಿಕಾರಿ
ಕಲಬುರಗಿ