ಜಿಲ್ಲೆ

ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ: ದೇವರಾಜೇಗೌಡ

ಹಾಸನ: ಜಿಲ್ಲೆಗೆ ಸಂಸದ ಶ್ರೇಯಸ್ ಪಟೇಲ್ ಹಾಗೂ ಅವರ ತಾತ ಪುಟ್ಟಸ್ವಾಮಿಗೌಡ ಮತ್ತು ಕಾಂಗ್ರೆಸ್ ನಾಯಕರ ಕೊಡುಗೆ ಏನು ಎಂಬುದರ ಬಗ್ಗೆ ಮೊದಲು ಶ್ವೇತ ಪತ್ರ ಹೊರಡಿಸಲಿ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಸವಾಲು ಹಾಕಿದರು.

ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿರುವುದು ಜೆಡಿಎಸ್-ಬಿಜೆಪಿ ಅವಧಿಯಲ್ಲಿ. ಶ್ರೇಯಸ್ ಪಟೇಲ್ ಅವರು ಸಂಸದರಾದ ನಂತರ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಜಿಲ್ಲೆಗೆ 22 ಯೋಜನೆಗಳನ್ನು ನೀಡಿದರು. ಆಗ ಇದೇ ಕಾಂಗ್ರೆಸ್ಸಿಗರು ‘ಇದು ಹಾಸನ-ರಾಮನಗರ ಬಜೆಟ್’ ಎಂದಿದ್ದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ಶ್ರೇಯಸ್ ಪಟೇಲ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗ ನಿಮ್ಮ ಕೊಡುಗೆ ಏನು ಎಂದು ಹೇಳಿ. ನಾನು ತುಂಬಾ ಪ್ರಾಮಾಣಿಕ ಎಂದು ಎನ್ನುವವರು ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ಇತರೆಡೆ 180 ಕೋಟಿ ರೂ. ಮೌಲ್ಯದ ಜಾಗವನ್ನು ಹೊಂದಿದ್ದಾರೆ. ಆದರೆ, ಚುನಾವಣಾ ಅಫಿಡವಿಟ್‌ನಲ್ಲಿ 35 ಕೋಟಿ ರೂ. ಎಂದು ತೋರಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಸುಪ್ರೀಂಕೋರ್ಟ್ ಆದೇಶ ಇದ್ದರೂ ಸರ್ಕಾರಿ ಜಮೀನು ವಾಪಸ್ ನೀಡದೆ ತಾವು ಕದ್ದುಮುಚ್ಚಿ ಇಟ್ಟುಕೊಂಡಿರುವುದೇ ನಿಮ್ಮ ಸಾಧನೆ ಎಂದು ಹೇಳಿದರು.

ವಿಧಾನ ಪರಿಷತ್‌ನಲ್ಲಿ ನಡೆದಿದ್ದನ್ನು ಹೊರಗಡೆ ಮಾಡನಾಡುವಂತಿಲ್ಲ. ಇದನ್ನು ಸಭಾಧ್ಯಕ್ಷರೇ ಹೇಳಿದ ಮೇಲೆ ಸಿ.ಟಿ. ರವಿ ಅವರನ್ನು ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದ್ದು ಏಕೆ ಎಂಬುದರ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದ ಅವರು, ರಾಜ್ಯ ಸಭೆಯಲ್ಲಿ ಅಮಿತ್ ಷಾ ಅವರು ಅಂಬೇಡ್ಕರ್ ಬಗ್ಗೆ ಮಾತನಾಡಿರುವ ಮಾತುಗಳನ್ನು ಪೂರ್ತಿಯಾಗಿ ನಾನು ಕೇಳಿಸಿಕೊಂಡಿಲ್ಲ. ಹಿಂದೆಲ್ಲಾ ಕಾಂಗ್ರೆಸ್‌ನವರು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಎಷ್ಟೆಲ್ಲಾ ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ ಎಂಬುದನ್ನು ಇತಿಹಾಸ ಹೇಳುತ್ತದೆ. ಆದರೆ, ಈಗ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.