ಬಾಗಲಕೋಟೆ: ರಾಜ್ಯದಲ್ಲಿ ಬಾಗಲಕೋಟೆ ಬಾಲ್ಯವಿವಾಹ ಜಿಲ್ಲೆಯೆಂಬ ಕಳಂಕವನ್ನು ಕುಮಾರಿ ಅಂಕಿತಾ ಬಸಪ್ಪ ಕೊಣ್ಣೂರ ಅಳಿಸಿ ಹಾಕಿದ್ದಾರೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶನಿವಾರ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಹಮ್ಮಿಕೊಂಡ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಹಾಗೂ ಪಾಲಕರು ಮತ್ತು ಶಿಕ್ಷಕರಿಗೆ ಸತ್ಕರಿಸಿ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಅದರಲ್ಲೂ ಎಸ್.ಎಸ್.ಎಲ್.ಸಿಯಲ್ಲಿ ೨೭ನೇ ಸ್ಥಾನದಲ್ಲಿತ್ತು. ಈ ಬಾರಿ ೧೩ನೇ ಸ್ಥಾನ ಪಡೆದು ಮೇಲೆ ಬಂದಿದೆ. ಇದರ ಜೊತೆಗೆ ಜಿಲ್ಲೆಯ ಅಂಕಿತಾ ಕೊಣ್ಣೂರು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆಕೊಂಡಿರುವುದು ಜಿಲ್ಲೆಗೆ ಹೊಸ ದಿಕ್ಕು ತೋರಿಸಿದಂತಾಗಿದೆ ಎಂದರು.
ಪ್ರತಿಯೊಬ್ಬ ಹೆಣ್ಣು ಮಗುವಿನ ಪಾಲಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕನಿಷ್ಟ ೧೮ ವರ್ಷ ಆಗುವವರೆಗೆ ಆದರೂ ಶಿಕ್ಷಣ ಕೊಡಿಸಬೇಕು. ಕುಮಾರಿ ಅಂಕಿತಾಳ ತಾಯಿ ಎಸ್.ಎಸ್.ಎಲ್.ಸಿಯಲ್ಲಿ ಶೇ.೮೪ ರಷ್ಟು ಮಾಡಿದ್ದರು ಕೂಡಾ ಗೃಹಿಣಿಯಾಗಿದ್ದಾರೆ. ಆದರೆ ತಮ್ಮಲ್ಲಿರುವ ಶೈಕ್ಷಣಿಕ ಚಿಲುಮೆಯನ್ನು ಮಗಳ ಮೂಲಕ ಸಾಧಿಸಿ ತೋರಿಸಿದ್ದಾರೆ. ಇವರ ಈ ಸಾಧನೆ ಎಲ್ಲ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಅದರಲ್ಲೂ ಬಾಲ್ಯವಿವಾಹ ಮಾಡಲು ಮುಂದಾಗುತ್ತಿರುವ ಪಾಲಕರಿಗೆ ಅಂಕಿತಾಳ ಸಾಧನೆ ಮಾದರಿಯಾಗಿದೆ. ಈಗಾಗಲೇ ಬಾಲ್ಯವಿವಾಹ ಬಂಧಕ್ಕೊಳಗಾದ ಅನೇಕ ಹೆಣ್ಣು ಮಕ್ಕಳಲ್ಲು ಕೂಡಾ ಅಂಕಿತಾಳಂತಹ ಪ್ರತಿಭೆಗಳು ಇದ್ದಿರಬಹುದೇನು ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಹಲವು ದಶಕಗಳ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಾಖಲೆ ನಿರ್ಮಿಸುತ್ತಿರುವ ಶಾಲೆಗಳು ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚು ಕಂಡುಬರುತ್ತಿದ್ದವು. ಅದರಲ್ಲೂ ಮರಿಮಲ್ಲಪ್ಪ ಶಾಲೆ ಮುಂಚೂಣಿಯಲ್ಲಿರುತ್ತಿತ್ತು. ಈ ವರ್ಷ ಅಂಕಿತಾಳ ಸಾಧನೆಯಿಂದಾಗಿ ಜಿಲ್ಲೆ ಅಷ್ಟೇ ಅಲ್ಲ ಉತ್ತರ ಕರ್ನಾಟಕ ಭಾಗವು ಶೈಕ್ಷಣಿಕವಾಗಿ ಅಭಿವೃದ್ದಿಯತ್ತ ಸಾಗುತ್ತಿರುವುದು ಕಂಡುಬಂದಿದ್ದು, ಆ ದಿಶೆಯಲ್ಲಿ ಜಿಲ್ಲಾ ಪಂಚಾಯತ ಪ್ರತಿ ಗ್ರಾಮದಲ್ಲಿ ಗ್ರ.ಪಂ ಮೇಲುಸ್ತುವಾರಿಯಲ್ಲಿ ಗ್ರಂಥಾಲಯ, ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದೆಂದು ತಿಳಿಸಿದರು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ ಸರಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬುದಕ್ಕೆ ಅಂಕಿತಾಳೆ ಸಾಕ್ಷಿಯಾಗಿದ್ದಾರೆ. ಪ್ರತಿಭೆ ತೋರಿಸಲು ಉತ್ತಮ ಶಾಲೆ ಮುಖ್ಯವಲ್ಲ ಸಾಧನೆ ಮುಖ್ಯ ಎಂಬುದನ್ನು ಸರಕಾರಿ ಶಾಲೆಯ ವಿದ್ಯಾರ್ಥಿ ತೋರಿಸಿದ್ದಾರೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ವೆಬ್ ಕಾಸ್ಟಿಂಗ್ ಮಾಡುವ ಮೂಲಕ ಗುಣಾತ್ಮಕ ಶಿಕ್ಷಣ ನೀಡುವಂತಹ ಜಿಲ್ಲೆಗಳನ್ನು ಗುರುತಿಸುವಂತ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಜು ವಾರದ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.