ಜಿಲ್ಲೆ

ಜಿಲ್ಲಾಸ್ಪತ್ರೆಯಲ್ಲಿ ಲೋಕಾಯುಕ್ತ ಪೊಲೀಸರ ಕಾರ‌್ಯಾಚರಣೆ

ಚಿತ್ರದುರ್ಗ: ಜಿಲ್ಲಾಸ್ಪತ್ರೆ ಹಲವು ವೈದ್ಯರ ವಿರುದ್ಧ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಚ್ ವಾರೆಂಟ್‌ನೊಂದಿಗೆ ಬುಧವಾರದಿಂದ ಎರಡು ದಿನಗಳ ಕಾಲ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮ ನೇತೃತ್ವದಲ್ಲಿ ನಾಲ್ಕು ತಂಡಗಳಲ್ಲಿ ಅಧಿಕಾರಿ, ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.

ಸಾಮಾನ್ಯ ಹೆರಿಗೆ ಆಗುವಂತಿದ್ದರೂ ಸಿಸೇರಿಯಿನ್‌ಗೆ ಒತ್ತಾಯಿಸುವುದು ಅಥವಾ ಹೆರಿಗೆಗೆ ಕ್ಲಿನಿಕ್, ನರ್ಸಿಂಗ್‌ಗಳಿಗೆ ಹೋಗುವಂತೆ ಹೇಳುವುದು, ಕ್ಯಾಶ್‌ಬುಕ್ ನಿರ್ವಹಣೆ ಸರಿಯಾಗಿಲ್ಲದೆ ಇರುವುದು, ಸಕಾಲದಲ್ಲಿ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಇರುವುದು, ಹಾಜರಾದರೂ ಹಾಜರಾತಿಗೆ ಸಹಿ ಮಾಡಿ ತಾವು ಖಾಸಗಿಯಾಗಿ ಪ್ರಾಕ್ಟೀಸ್ ಮಾಡುವ ಕ್ಲಿನಿಕ್‌ಗಳಿಗೆ ತೆರಳುವುದು, ರೋಗಿಗಳಿಗೆ ವೀಲ್‌ಚೇರ್ ಇತ್ಯಾದಿ ಸೌಕರ್ಯ ಒದಗಿಸಲು ಹಣ ಕೊಡಬೇಕಿದೆ ಎಂಬಿತ್ಯಾದಿ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಕಾರ‌್ಯಾಚರಣೆ ನಡೆಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ, ಇನ್ಸ್ ಪೆಕ್ಟರ್‌ಗಳಾದ ಸರಳಾ, ಮಂಜುನಾಥ್, ಭೋಜರಾಜ ಲಮಾಣಿ ಮತ್ತವರ ಸಿಬ್ಬಂದಿ ಇದ್ದರು.

ಜಿಲ್ಲಾಸ್ಪತ್ರೆಯಲ್ಲಿದ್ದ ಹಲವು ಲೋಪಗಳು, ಆರೋಪಗಳ ಕುರಿತಂತೆ ತಮಗೆ ಬಂದಿದ್ದ ನಾನಾ ದೂರುಗಳನ್ನಾಧರಿಸಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ರಾಜ್ಯಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರಿಗೆ ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು. ಅವರ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.