ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಮೂಲಭೂತ ಸೌಲಭ್ಯ ಹಾಗೂ ರಶೀದಿಗೆ ಮುನ್ನ ತುರ್ತು ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗುರುವಾರ ಜಿಲ್ಲಾ ಸರ್ಜನ್ ಸಿ.ಮೋಹನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರವೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಜಿಲ್ಲಾಸ್ಪತ್ರೆಯ ಶೌಚಗೃಹ ಸೇರಿದಂತೆ ಇನ್ನಿತರೆಡೆ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿಲ್ಲ. ಇದರಿಂದ ರೋಗಿಗಳು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷö್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.
ಪ್ರಸ್ತುತ ಆಸ್ಪತ್ರೆಯಲ್ಲಿ ನೀರು ಹಾಗೂ ಶೌಚಗೃಹದ ಸಮಸ್ಯೆ ಎದ್ದುಕಾಣುತ್ತಿದೆ. ಅಲ್ಲದೇ ಹೊರಾಂಗಣದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದ ಇನ್ನಷ್ಟು ಸಮಸ್ಯೆಗಳು ಉದ್ಬವಿಸುತ್ತಿವೆ. ಜಿಲ್ಲೆಯ ವಿವಿದೆಡೆಯಿಂದ ಆಗಮಿಸುವ ಬಡ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದರು.
ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆ ರೋಗಿಗಳ ಪರದಾಟ ಹೇಳತೀರಾಗಿತ್ತು. ಅಲ್ಲದೇ ಆಸ್ಪತ್ರೆಯ ಕೆಲವು ವೈದ್ಯರು ಖಾಸಗಿ ಕ್ಲಿನಿಕ್‌ಗಳನ್ನು ತೆರೆದಿದ್ದಾರೆ. ಆದರೆ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ತೋರುವ ವಿಶೇಷ ಕಾಳಜಿಯನ್ನು, ಜಿಲ್ಲಾಸ್ಪತ್ರೆಯ ಕರ್ತವ್ಯದಲ್ಲಿ ತೋರದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಸ್ಪತ್ರೆಯ ಮೂಲಸೌಕರ್ಯದಿಂದ ಕೆಲವು ರೋಗಿಗಳು ಜೀವ ಉಳಿದರೆ ಸಾಕೆಂಬ ನಿಟ್ಟಿನಲ್ಲಿ ಅಧಿಕ ಬಡ್ಡಿಯಲ್ಲಿ ಸಾಲ ಮಾಡಿಕೊಂಡು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೊಂದೆಡೆ ದೊಡ್ಟಮಟ್ಟಿನ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಜೀವನಪೂರ್ತಿ ಸಂಕಷ್ಟವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆ ನಿಟ್ಟಿನಲ್ಲಿ ಕೂಡಲೇ ಜಿಲ್ಲಾ ಸರ್ಜನ್ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಮೂಲಸೌಲಭ್ಯ, ವೈದ್ಯರ ಕೊರತೆ ನೀಗಿಸುವುದು, ತುರ್ತು ರೋಗಿಗಳಿಗೆ ಮೊದಲ ಆದ್ಯತೆ ನೀಡಲು ಮುಂದಾಗದಿದ್ದಲ್ಲಿ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೆ ತಾಲೂಕು ಅಧ್ಯಕ್ಷ ಮನೋಜ್, ಜಿಲ್ಲಾ ಗೌರವಾಧ್ಯಕ್ಷ ಷಡಕ್ಷರಿ, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್. ಶೆಟ್ಟಿ, ಕಾರ್ಯದರ್ಶಿ ಮಧು, ಸಂಘಟನಾ ಕಾರ್ಯದರ್ಶಿ ರುದ್ರೇಶ್, ಆಟೋಘಟಕದ ಅಧ್ಯಕ್ಷ ಇರ್ಷಾದ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಪೂರ್ಣಿಮಾ, ಮುಖಂಡರಾದ ನಾಗಲತ, ಚಂದನ, ಲತಾ, ಅನ್ನಪೂರ್ಣ, ರಂಜಿತ್, ಮನುಬಾಯಿ, ಭರತ್ ಮತ್ತಿತರರಿದ್ದರು.