ಜಿಲ್ಲೆ

ಜಿಲ್ಲಾಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾೃನ್ ಅಳವಡಿಕೆಗೆ ಸಿಎಂ ಸೂಚನೆ

ಮೈಸೂರು: ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾೃನ್ ಸೇರಿದಂತೆ ಇನ್ನಿತರ ಉಪಕರಣ ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಎಂಆರ್‌ಐ, ಎಕ್ಸ್‌ರೇ ಸೇರಿದಂತೆ ಎಲ್ಲ ತಪಾಸಣಾ ವ್ಯವಸ್ಥೆ ಇರಬೇಕು. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಹಣ ಖರ್ಚಾಗದೆ ಹಾಗೇ ಉಳಿದಿದೆ. ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ಅಗತ್ಯ ಸಲಕರಣೆಗಳೇ ಇಲ್ಲ ಏಕೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು.
ಸಂಬಂಧಪಟ್ಟ ಆಸ್ಪತ್ರೆಗಳಲ್ಲಿ ಉಪಕರಣಗಳನ್ನು ಅಳವಡಿಸಲು ಸಚಿವ ಸಂಪುಟದಲ್ಲಿ ಅನುಮತಿ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾೃನಿಂಗ್ ದೊಡ್ಡ ದಂಧೆಯಾಗಿದ್ದು, ಅದಕ್ಕೆ ಕಡಿವಾಣ ಹಾಕಬೇಕು. ಗ್ರಾಮೀಣ ಭಾಗದಲ್ಲಿ ವೈದ್ಯರಿಗಾಗಿಯೇ ಕಟ್ಟಿಸಿರುವ ವಸತಿಗೃಹದಲ್ಲಿ ವೈದ್ಯರು ಉಳಿದುಕೊಳ್ಳಬೇಕು ಎಂದು ಸೂಚಿಸಿದರು.
ಕೆ.ಆರ್.ಆಸ್ಪತ್ರೆಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಉನ್ನತೀಕರಿಸುವುದು ಸೇರಿದಂತೆ ಇನ್ನಿತರ ಅಗತ್ಯತೆ ಪೂರೈಸುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸೂಚಿಸಲಾಯಿತು.
ಹುಣಸೂರು ರಸ್ತೆಯ ಬಿಳಿಕೆರೆ ಬಳಿ ಅಪಘಾತ ಹೆಚ್ಚಾಗುತ್ತಿರುವುದರಿಂದ ಅಲ್ಲಿರುವ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.