ಜಿಲ್ಲೆ

ಜಿಲ್ಲಾಸ್ಪತ್ರೆ ಸಿಬ್ಬಂದಿ ಸಾಮೂಹಿಕ ರಜೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಪ್ರವಾಸಕ್ಕೆ ತೆರಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಲ್ಲಿಸುವ ವರದಿ ಆಧರಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದ್ದಾರೆ.

ಆಸ್ಪತ್ರೆಯ ಬಹುತೇಕ ಸಿಬ್ಬಂದಿ ರಜೆ ಮೇಲೆ ತೆರಳಿದ್ದಾರೆಂಬ ಮಾಹಿತಿ ಆಧರಿಸಿ ಜಿಲ್ಲಾಸ್ಪತ್ರೆಗೆ ಶನಿವಾರ ಸಂಜೆ ಹಠಾತ್ ಭೇಟಿ ನೀಡಿ ಪರಿಶೀಲಿಸಿದ್ದು ಈ ವೇಳೆ 16 ಸಿಬ್ಬಂದಿ ಪೈಕಿ 8 ಜನರಿಗೆ ರಜೆ ನೀಡಲಾಗಿದೆ. ರಜೆ ಮಂಜೂರು ವಿಚಾರದಲ್ಲಿ ಜಿಲ್ಲಾ ಸರ್ಜನ್ ಎಡವಿದ್ದಾರೆ. ಈ ಕುರಿತು ಕೂಲಂಕಷವಾಗಿ ಪರಿಶೀಲಿಸಲು ಡಿಸಿ, ಸಿಇಒ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ರಜೆ ಮೇಲೆ ತೆರಳಿದವರಲ್ಲಿ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿ ಇದ್ದಾರೆಂಬ ಮಾಹಿತಿ ಇದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಮೇಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸೇವಾ ಮನೋಭಾವದ ವೈದ್ಯರು ಜಿಲ್ಲೆಗೆ ಬೇಕು. ಜನರಿಗೆ ಸರಿಯಾದ ಚಿಕಿತ್ಸೆ ದೊರೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು.

ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ತೆರಳಿ ಪರಿಶೀಲಿಸಿದ ಸಚಿವರು ಕೆಲವು ಸಲಹೆ ಸೂಚನೆ ನೀಡಿದರು. ಜಿಲ್ಲಾಸ್ಪತ್ರೆ ಆವರಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ತುರ್ತು ಚಿಕಿತ್ಸಾ ಘಟಕದ ವಾರ್ಡ್‌ಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿ ಕುರಿತು ಸಂಬಂಧಿತರಿಂದ ಮಾಹಿತಿ ಪಡೆದರು.

ಆಡಳಿತ ಕಚೇರಿ ಸಿಬ್ಬಂದಿ

ಡಿಎಸ್ ಡಾ.ಎಸ್.ಪಿ.ರವೀಂದ್ರ ಮಾತನಾಡಿ, ಆಸ್ಪತ್ರೆ ಆಡಳಿತ ಕಚೇರಿಯ 16 ಜನರ ಪೈಕಿ 8 ಜನರು ಶುಕ್ರವಾರ ಹಕ್ಕಿನ ರಜೆ ತೆಗೆದುಕೊಂಡಿದ್ದಾರೆ. ರಜೆ ಪಡೆದವರಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇಲ್ಲ.ಮಾಹಿತಿ ಕೊರತೆಯಿಂದ ಸಚಿವರು ವೈದ್ಯರು, ಶುಶ್ರೂಷಕ ಸಿಬ್ಬಂದಿ ಇದ್ದಾರೆಂದು ಹೇಳಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಪಂ ಸಿಇಒ ಡಾ.ಎಸ್.ಆಕಾಶ್, ಮಾಜಿ ಸದಸ್ಯ ನಾಗೇಂದ್ರನಾಯ್ಕ ಇದ್ದರು.