ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯೊಬ್ಬರ ಸಾವಿಗೆ ವೈದ್ಯರ ನಿರ್ಲಕ್ಷೃ ಕಾರಣವೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿ ಜಾಗನೂರಹಟ್ಟಿ ನಿವಾಸಿ ರೋಜಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಐದು ದಿನಗಳ ಬಳಿಕ ಅವರನ್ನು ಡಿಸ್‌ಜಾರ್ಜ್ ಮಾಡಲಾಗಿತ್ತು. ಡಾ. ರೂಪಶ್ರೀ ರೋಜಾ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಡಿಸ್‌ಜಾರ್ಜ್ ಆದ ಬಳಿಕ ನಾಲ್ಕೈದು ಬಾರಿ ಬಾಣಂತಿ ಜಿಲ್ಲಾಸ್ಪತ್ರೆಗೆ ಆಗಮಿಸಿ ತಪಾಸಣೆ ಮಾಡಿಸಿಕೊಂಡು ಹೋಗಿದ್ದರು.
ಆದರೆ, 40 ದಿನಗಳಾದರೂ ಶಸ್ತ್ರಚಿಕಿತ್ಸೆ ಜಾಗದಲ್ಲಿ ರಕ್ತ, ಕೀವು ತುಂಬಿಕೊಂಡು ಬಾಣಂತಿ ಮೃತಪಟ್ಟಿದ್ದಾರೆ. ಆದ್ದರಿಂದ ಡಾ. ರೂಪಶ್ರೀ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಇಂತಿಷ್ಟು ಹಣ ಕೊಡಲೇಬೇಕೆಂದು ಆರೋಪಿಸಿದ ಪ್ರತಿಭಟನಾಕಾರರು,ಪರಿಸ್ಥಿತಿ ಹೀಗೆ ಮುಂದುವರಿದರೆ ಬಡವರ ಗತಿಯೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ. ಅಭಿನವ್ ಅವರಿಗೆ ಮನವಿ ಸಲ್ಲಿಸಿದರು.
ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್‌ನಾಯ್ಕ, ಓಬಣ್ಣ, ಅಶೋಕ್, ಅಶ್ವಿನಿ, ಮುತ್ತಯ್ಯ, ಮಂಜಣ್ಣ, ತಿಪ್ಪೇಸ್ವಾಮಿ, ಬಿ. ಶಿವಮೂರ್ತಿ, ಅರುಣ್ ಕುಮಾರ್, ಮಂಜುನಾಥ, ಸುವರ್ಣ, ಶಫಿ, ರಾಘವೇಂದ್ರ, ನಾಗರಾಜ್, ಆಸೀಫುಲಾ, ರಾಘವೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.