ಜಿಲ್ಲೆ

ಜಿಲ್ಲಾಸ್ಪತ್ರೆ ಕ್ಲೀನ್ ಆ್ಯಂಡ್ ನೀಟ್ ಆಗಿರಬೇಕು


ಚಿತ್ರದುರ್ಗ: ಜಿಲ್ಲೆಯ ಎಲ್ಲ ರೋಗಿಗಳು ಬರುವಂಥ ಜಿಲ್ಲಾಸ್ಪತ್ರೆ ಕ್ಲೀನ್ ಆ್ಯಂಡ್ ನೀಟ್ ಆಗಿರಬೇಕು ಎಂದು ನೂತನ ಶಾಸಕ ವೀರೇಂದ್ರ ಪಪ್ಪಿ ಆಸ್ಪತ್ರೆಯ ಸಿಬ್ಬಂದಿಗೆ ತಾಕೀತು ಮಾಡಿದರು.
ಗೆಲುವಿನ ಬಳಿಕ ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಅವರು, ವಿವಿಧ ವಾರ್ಡ್, ಶಸ್ತ್ರ ಚಿಕಿತ್ಸಾ ಕೊಠಡಿಗಳು, ರಕ್ತ ಪರೀಕ್ಷಾ ಕೇಂದ್ರ ಇತ್ಯಾದಿ ವಿಭಾಗಗಳನ್ನು ಪರಿಶೀಲಿಸಿ ಮಾತನಾಡಿದರು.
ಶೌಚಗೃಹಗಳ ಸ್ವಚ್ಛವಾಗಿಟ್ಟುಕೊಳ್ಳಬೇಕು.

ನೀರಿಗೆ ಕೊರತೆಯಾಗಬಾರದು. ಹೊರಗಿನಿಂದ ಔಷಧ ತರುವಂತೆ ಚೀಟಿ ಬರೆದು ಕೊಡಬಾರದು. ಲಂಚದ ಹಾವಳಿ ದೂರುಗಳಿರಬಾರದು. ಯಾವುದೇ ಕಾರಣಕ್ಕೂ ರೋಗಿಗಳನ್ನು ಅಲೆದಾಡಿಸ ಬಾರದು. ರೋಗಿಗಳನ್ನು ಬೆಂಗಳೂರು,ದಾವಣಗೆರೆ,ಮಣಿಪಾಲ್‌ಗೆ ಕರೆದೊಯ್ಯುವಂತೆ ಶಿಫಾರಸು ಮಾಡಬಾರದು. ಅಗತ್ಯ ಯಂತ್ರೋಪಕರಣಗಳಿಗೆ ಅನುದಾನ ಬಿಡುಗಡೆ ಮಾಡಿಸುವುದಾಗಿ ವೈದ್ಯಾಧಿಕಾರಿಗಳಿಗೆ ಭರವಸೆ ನೀಡಿದರು.

ಆರು ತಿಂಗಳೊಳಗೆ ವ್ಯವಸ್ಥೆ ಬದಲಾವಣೆ:
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಏನಾಗಿತ್ತೋ ನನಗದು ಬೇಡ, ಮುಂದೆ ಎಲ್ಲವೂ ಚೆನ್ನಾಗಿರಬೇಕು. ಇನ್ನು ತಿಂಗಳಲ್ಲಿ ಮೂರು ಬಾರಿಯಾದರೂ ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ಆರು ತಿಂಗಳ ಒಳಗೆ ಆಸ್ಪತ್ರೆ ಹೇಗಾಗಿದೆ ಎಂದು ನೀವೇ(ಮಾಧ್ಯಮದವರು)ವರದಿ ಮಾಡುತ್ತೀರಿ ಎಂದರು.
ನಗರದಲ್ಲಿರುವ ರೋಡ್ ಡಿವೈಡರ್‌ಗಳ ಕುರಿತಂತೆ ತಾಂತ್ರಿಕ ಸಮಿತಿ ಸಭೆ ನಡೆಸುತ್ತೇನೆ. ಒಂದು ಕಿ.ಮೀ. ಡಿವೈಡರ್‌ಗೆ ಒಂದು ಕೋಟಿ ರೂ.ಖರ್ಚಾಗಿದೆ. ಪಾದಚಾರಿಗಳಿಗೆ, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕೆಲವೆಡೆ ಓಪನ್ ಮಾಡಿದರೆ ಸಾಕೇ ಎಂಬುದರ ಕುರಿತು ತೀರ್ಮಾನಕ್ಕೆ ಬರಲಾಗುವುದು ಎಂದರು.
ನಗರದಲ್ಲಿ ಸಿಸಿ ಕ್ಯಾಮರಾಗಳ ಸಹಿತ ಸಂಚಾರ ವ್ಯವಸ್ಥೆ ಸುಧಾರಣೆಗೆ ಒತ್ತು ಕೊಡಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಮಾತು ಕೊಟ್ಟಿರುವಂತೆ 21 ಕಾರ‌್ಯಕ್ರಮಗಳನ್ನು ಅನುಷ್ಠಾನ ಗೊಳಿಸುವುದಾಗಿ ಹೇಳಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜ್,ನಿವಾಸಿ ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್ ಮತ್ತಿತರರು ಇದ್ದರು.

ಸಮಯ ಸರಿ ಇದ್ದರೆ ಎಲ್ಲವೂ ಚೆನ್ನಾಗಿರುತ್ತದೆ
ಗೆಲುವಿನ ಬಳಿಕ ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ವಾರ್ಡ್ ಒಂದರಲ್ಲಿದ್ದ ಗಡಿಯಾರ ಸ್ಥಗಿತವಾಗಿದ್ದನ್ನು ಗಮನಿಸಿ ಇದರ ಶೆಲ್ ಬದಲಾಯಿಸಿದರೆ ಗಡಿಯಾರ ಸರಿ ಸಮಯ ತೋರಿಸುತ್ತದೆ. ಟೈಮ್ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ ಎಂದು ಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಶಾಸಕ ಕೆ.ಸಿ.ವೀರೇಂದ್ರ ಮಾರ್ಮಿಕವಾಗಿ ನುಡಿಯುತ್ತಿದ್ದಂತೆ ಶಾಸಕರ ಆಸ್ಪತ್ರೆ ಭೇಟಿ ಪೂರ್ಣವಾಗುವುದರೊಳಗೆ ಗೋಡೆ ಮೇಲಿದ್ದ ಗಡಿಯಾರ ಸ್ಥಳಾಂತರವಾಗಿತ್ತು.