ಜಿಲ್ಲೆ

ಜಿಲ್ಲಾಧ್ಯಕ್ಷರ ಬದಲಾವಣೆ ಹೇಳಿಕೆ ಖಂಡನೀಯ: ಎಚ್.ಪಿ. ಶಂಕರ್

Hassan - Mohan Kanthur

ಹಾಸನ: ಇತ್ತೀಚೆಗೆ ಕಾಂಗ್ರೆಸ್ ಜಿಲ್ಲಾ ವಕ್ತಾರ ದೇವರಾಜೇಗೌಡ ಅವರು ಜಿಲ್ಲಾಧ್ಯಕ್ಷ ಈ.ಎಚ್. ಲಕ್ಷ್ಮಣ್ ಬದಲಾವಣೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದು ಹಿಂದುಳಿದ ವರ್ಗದ ಮುಖಂಡನನ್ನು ಹತ್ತಿಕ್ಕುವ ಹುನ್ನಾರವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಪಿ. ಶಂಕರ್ ರಾಜು ಹೇಳಿದರು.

ಕೇವಲ ಆರು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿರುವ ಲಕ್ಷ್ಮಣ್ ಅವರು, ಪಕ್ಷ ಸಂಘಟನೆ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇಂತಹ ವೇಳೆ ದೇವರಾಜೇಗೌಡ ಅವರು ಅಧ್ಯಕ್ಷರ ಬದಲಾವಣೆ ಬಗ್ಗೆ ಹೇಳಿಕೆ ನೀಡಬಾರದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

ಎಚ್.ಸಿ. ಮಹದೇವಪ್ಪ ಅವರು ಹಾಸನ ಜಿಲ್ಲಾ ಉಸ್ತುವಾರಿ ಆಗಬೇಕು ಎಂಬುದು ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಸೆಯಾಗಿದೆ. ಆದರೆ, ದೇವರಾಜೇಗೌಡ ಅವರು ಮಹದೇವಪ್ಪ ಅವರಿಗೆ ಉಸ್ತುವಾರಿ ಕೊಡಬಾರದು ಎಂದು ನಿಯೋಗ ತೆರಳುತ್ತಿರುವ ಬಗ್ಗೆ ಮಾತನಾಡಿದ್ದು ಖಂಡನೀಯ. ಪಕ್ಷ ಸಂಘಟನೆ ಮಾಡಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿರುವ ದೇವರಾಜೇಗೌಡ ಅವರು, ಅಧ್ಯಕ್ಷರ ಬದಲಾವಣೆ ಬಯಸುತ್ತಿರುವುದು ಪಕ್ಷಕ್ಕೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎಸ್. ಕುಮಾರಸ್ವಾಮಿ, ಟಿ.ಟಿ. ರಂಗಸ್ವಾಮಿ, ಬೀರೇಗೌಡ, ಗಣೇಶ್, ರವಿ, ಶೇಖರಪ್ಪ ಇತರರು ಇದ್ದರು.