ಜಿಲ್ಲೆ

ಜಿಲ್ಲಾಧ್ಯಕ್ಷರ ಬದಲಾವಣೆ ಚರ್ಚೆ ಮುನ್ನೆಲೆಗೆ

ಚಾಮರಾಜನಗರ: ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಬದಲಾವಣೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿರುವ ಬೆನ್ನಲ್ಲೇ ಜಿಲ್ಲಾಧ್ಯಕ್ಷರ ಬದಲಾವಣೆ ವಿಚಾರದ ಚರ್ಚೆಯೂ ಮುನ್ನಲೆಗೆ ಬಂದಿದೆ.

ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಹಾಲಿ ಅಧ್ಯಕ್ಷರಾಗಿರುವ ಪಿ.ಮರಿಸ್ವಾಮಿ ಕಾವೇರಿ ಜಲಾನಯನ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ(ಕಾಡಾ)ಅಧ್ಯಕ್ಷರೂ ಆಗಿದ್ದಾರೆ. ರಾಜ್ಯದಲ್ಲಿ ಇದೇ ರೀತಿ ಒಟ್ಟು 11 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ಸಿಕ್ಕಿದೆ. ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಮತ್ತು 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದೋ ಅಥವಾ ನಾಳೆಯೋ ಜಿಲ್ಲಾಧ್ಯಕ್ಷರ ಬದಲಾವಣೆಯಾಗುವ ಸಾಧ್ಯತೆಗಳು ಚಾಲ್ತಿಯಲ್ಲಿವೆ.

ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಒಡಿಶಾದಲ್ಲಿ ಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಒಂದೆರಡು ದಿನದಲ್ಲಿ ಮತ್ತೆ ಒಂದೆರಡು ರಾಜ್ಯಗಳಲ್ಲಿ ಬದಲಾವಣೆ ಆಗಲಿದೆ. 8 ದಿನಗಳಲ್ಲಿ ಎಲ್ಲ ಬದಲಾವಣೆ ಮುಗಿಯುತ್ತದೆ’ ಎಂದು ಹೇಳಿದ್ದಾರೆ. ಈ ಹೇಳಿಕೆಯು ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆಗೆ ಇಂಬು ನೀಡಿದರೆ, ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ಕಾಲ ಸನ್ನೀಹಿತವಾಗುತ್ತಿದೆ ಎಂಬ ಮಾತುಗಳಿಗೆ ಪುಷ್ಟಿ ನೀಡುತ್ತಿದೆ.

ರೇಸ್‌ನಲ್ಲಿರ‌್ಯಾರು?:

ಚಾಮರಾಜನಗರ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ತನ್ನದೇ ಆದ ಘನತೆ ಇದೆ. ಈವರೆಗೆ ಸಂಘಟನಾತ್ಮಕ ಶಕ್ತಿ ಹೊಂದಿರುವ ನಾಯಕರು ಚುಕ್ಕಾಣಿ ಹಿಡಿದು ಪಕ್ಷ ಕಟ್ಟಿದ್ದಾರೆ. ಮಾಜಿ ಶಾಸಕ ಎಸ್.ಪುಟ್ಟಸ್ವಾಮಿ, ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎನ್.ನಾಗರಾಜಮೂರ್ತಿ, ಮಾಜಿ ಸಂಸದ ಎ.ಸಿದ್ದರಾಜು, ಮಾಜಿ ಶಾಸಕ ಸಿ.ಗುರುಸ್ವಾಮಿ, ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಪ್ರಸ್ತುತ ಪಿ.ಮರಿಸ್ವಾಮಿ ಅಧ್ಯಕ್ಷರಾಗಿದ್ದಾರೆ. ಇವರಿಗೆ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಇದೆ.

ಇವರ ಬದಲಾವಣೆ ಹಿನ್ನೆಲೆಯಲ್ಲಿ ಮುಂದಿನ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಪ್ರಬಲವಾಗಿ ಕೆಲವರು ಹೆಸರುಗಳು ಕೇಳಿಬರುತ್ತಿವೆ. ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚಾಮರಾಜನಗರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜವಾದ್ ಅಹಮದ್ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಕೆಪಿಸಿಸಿ ಶಾಸಕರು, ಮಾಜಿ ಶಾಸಕರು, ಪಕ್ಷದ ಪ್ರಮುಖ ನಾಯಕರು ಶಿಾರಸ್ಸು, ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ಕೆಪಿಸಿಸಿ ಆಯ್ಕೆ ಮಾಡಿದವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಒಲಿಯಲಿದೆ.

ಜಿಪಂ, ತಾಪಂ ಎಲೆಕ್ಷನ್ ಟಾಸ್ಕ್..: ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ನೂತನ ಸಾರಥಿ ಚುಕ್ಕಾಣಿ ಹಿಡಿಯುವುದು ಅಥವಾ ಹಾಲಿ ಅಧ್ಯಕ್ಷರೇ ಮುಂದುವರೆಯುವ ಎರಡೂ ಬೆಳವಣಿಗೆಗಳು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗಮನ ಸೆಳೆಯಿತು. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಕ್ಷೇತ್ರಗಳು ಕೈ ವಶವಾದರೂ ಹನೂರು ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತು. ಆದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದಾಖಲೆಯ ಗೆಲುವು ಸಾಧಿಸಿತು. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಅಧಿಕ ಮತಗಳು ಲಭಿಸಿದವು. ವಿಧಾನಸಭೆ ಚುನಾವಣೆಯಲ್ಲಿ ೋಷಣೆ ಮಾಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಭಾವಳಿ ಲೋಕಸಭೆ ಚುನಾವಣೆಯಲ್ಲೂ ಮತಗಳನ್ನು ತಂದುಕೊಟ್ಟವು. ಈಗಲೂ ಸಹ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಉತ್ತುಂಗದಲ್ಲಿವೆ. ಮಹಿಳಾ ಮತದಾರರನ್ನು ಸೆಳೆದಿಟ್ಟುಕೊಂಡಿವೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೂ ಗ್ಯಾರಂಟಿ ಯೋಜನೆ ತನ್ನ ಪರಿಣಾಮ ಬೀರುವಿಕೆಯನ್ನು ಮುಂದುವರೆಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಕೊಡುವುದರಲ್ಲಿ ಅನುಮಾನವಿಲ್ಲ. ಹಾಗೆಂದು ಕಾಂಗ್ರೆಸ್‌ಗೆ ಸವಾಲುಗಳೇ ಇರುವುದಿಲ್ಲ ಎಂದೇನಿಲ್ಲ. ಪಕ್ಷವನ್ನು ಮುನ್ನಡೆಸುವ ಜಿಲ್ಲಾಧ್ಯಕ್ಷರಿಗೆ ಈ ವಿಚಾರದಲ್ಲಿ ದೊಡ್ಡ ಟಾಸ್ಕ್‌ಗಳು ಎದುರಾಗಲಿವೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬದಲಾವಣೆ ಸಾಧ್ಯತೆಗಳು ಇವೆ. ಯಾರು ಜಿಲ್ಲಾಧ್ಯಕ್ಷರಾಗುತ್ತಾರೆ ಎನ್ನುವುದು ಗೊತ್ತಿಲ್ಲ. ಸಿ.ಪುಟ್ಟರಂಗಶೆಟ್ಟಿ, ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ರಾಜ್ಯದ ಹಲವು ಕಡೆಗಳಲ್ಲಿ ಬದಲಾವಣೆಯಾಗುವಾಗ ಚಾಮರಾಜನಗರದಲ್ಲೂ ಜಿಲ್ಲಾಧ್ಯಕ್ಷರ ಬದಲಾವಣೆಯಾಗಲಿದೆ. 5 ವರ್ಷ ಪೂರ್ಣಗೊಳಿಸಿರುವ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರ ಬದಲಾವಣೆಯಾಗಲಿದೆ. ಜಿ.ಎನ್.ನಂಜುಂಡಸ್ವಾಮಿ, ರಾಜ್ಯ ಉಪಾಧ್ಯಕ್ಷ, ಕೆಪಿಸಿಸಿ