ವಿಜಯವಾಣಿ ವಿಶೇಷ ಮೈಸೂರು
ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಂಡು, ಆಧುನಿಕ ಶೈಲಿಯಲ್ಲಿ ಆಕರ್ಷಕವಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯಕ್ಕೆ ಈಗ ಸಾರ್ವಜನಿಕರು ತೆರಳುವುದೇ ಪ್ರಯಾಸವಾಗಿದೆ.
ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ನಿತ್ಯ ನೂರಾರು ಜನರು ಜಿಲ್ಲಾಧಿಕಾರಿ ಕಚೇರಿಗೆ ತೆರಳಬೇಕಾಗುತ್ತದೆ. ಆದರೆ ಕಚೇರಿ ಸ್ಥಳ ದೂರ ಎನ್ನುವ ಕಾರಣಕ್ಕೆ ಸಿದ್ಧಾರ್ಥನಗರ ಬಡಾವಣೆಯಲ್ಲಿರುವ ಕಚೇರಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಈ ಹಿಂದೆ ಮಹಾರಾಣಿ ಕಾಲೇಜು ಬಳಿ ಇದ್ದ ಜಿಲ್ಲಾಧಿಕಾರಿ ಕಚೇರಿಯನ್ನು ಸಿದ್ಧಾರ್ಥನಗರದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಕೋಟ್ಯಂತರ ರೂ. ಖರ್ಚು ವೆಚ್ಚ ಮಾಡಿ ಕಟ್ಟಿರುವ ವಿಶಾಲ ಕಟ್ಟಡದಲ್ಲಿ ಈಗ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲಾ ಮಟ್ಟದ ಬಹುತೇಕ ಕಚೇರಿಗಳು ಒಂದೇ ಸಮುಚ್ಚಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಅಲ್ಲಿಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮಾಂತರ ಭಾಗದಿಂದ ಬರುವವರು ಮಾತ್ರವಲ್ಲದೆ, ನಗರ ಪ್ರದೇಶದ ಜನರೂ ತೊಂದರೆ ಅನುಭವಿಸುತ್ತಿದ್ದಾರೆ. ಅರ್ಜಿ ಹಿಡಿದು ಬರುವ ಸಾರ್ವಜನಿಕರು ಆಟೋಗೆ ನೂರಾರು ರೂ. ನೀಡಿ ಜಿಲ್ಲಾಧಿಕಾರಿ ಕಚೇರಿ ತಲುಪುವ ಸ್ಥಿತಿ ನಿರ್ಮಾಣವಾಗಿದೆ. ವಿಶಾಲವಾದ ಐದು ಎಕರೆ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದ್ದು, ಎರಡು ಅಂತಸ್ತಿನಲ್ಲಿ 80ಕ್ಕೂ ಹೆಚ್ಚು ಕೊಠಡಿಗಳಿವೆ.
ಜಿಲ್ಲಾಧಿಕಾರಿ ಕಚೇರಿ, ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವಾರು ಕಚೇರಿಗಳು ಈಗಾಗಲೇ ಸ್ಥಳಾಂತರಗೊಂಡು ಕಾರ್ಯನಿರ್ವಹಿಸುತ್ತಿದ್ದು, ಅವಶ್ಯಕತೆ ಇರುವವರು ನಿತ್ಯ ಕಚೇರಿಗೆ ಹೋಗಲೇ ಬೇಕಾಗಿದೆ.
ಜನರಿಲ್ಲದೆ ಬಿಕೋ ಎನ್ನುತ್ತಿದೆ ಕಚೇರಿ:
ಜಿಲ್ಲಾಧಿಕಾರಿ ಹಳೇ ಕಚೇರಿ ಕಟ್ಟಡದಲ್ಲಿ ನಿತ್ಯ ಕಂಡುಬರುತ್ತಿದ್ದ ಜನದಟ್ಟಣೆ ಹೊಸ ಕಟ್ಟಡದಲ್ಲಿ ಕಣ್ಮರೆಯಾಗಿದ್ದು, ಜನರಿಲ್ಲದೆ ಬಿಕೋ ಎನ್ನುತ್ತಿದೆ. ಪಿರಿಯಾಪಟ್ಟಣ, ಹುಣಸೂರು, ಕೆ.ಆರ್. ನಗರ, ನಂಜನಗೂಡು ಹಾಗೂ ಎಚ್.ಡಿ. ಕೋಟೆ ತಾಲೂಕು ಭಾಗದಿಂದ ಬರುವವರಿಗೆ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಕಚೇರಿ ಹತ್ತಿರವಾಗಿತ್ತಲ್ಲದೆ, ನಗರ ಪ್ರದೇಶಕ್ಕೆ ಹೊಂದಿಕೊಂಡಿತ್ತು. ಜತೆಗೆ, ರೈಲ್ವೆ ನಿಲ್ದಾಣವೂ ಕೂಗಳತೆ ದೂರದಲ್ಲಿತ್ತು. ಆದರೆ ದೂರದ ಸಿದ್ಧಾರ್ಥನಗರದಲ್ಲಿರುವ ಹೊಸ ಕಟ್ಟಡಕ್ಕೆ ಈ ಭಾಗದ ಜನರು ತೆರಳವುದು ದುಸ್ತರವಾಗಿದೆ. ಪರಿಣಾಮ ಬೃಹತ್ ಕಟ್ಟಡ ಜನರಿಲ್ಲದೆ ಭಣಗುಡುತ್ತಿದೆ.
ನೂತನ ಕಟ್ಟಡ ಉದ್ಘಾಟನೆಯಾಗಿ 5 ವರ್ಷಗಳವರೆಗೆ ಬಳಕೆಯಾಗದ ಹಿನ್ನೆಲೆಯಲ್ಲಿ ಇಡೀ ಕಟ್ಟಡ ಧೂಳು ಹಿಡಿದು, ಭೂತಬಂಗಲೆಯಾಗಿ ಮಾರ್ಪಾಡಾಗಿತ್ತು. ಈಗ ಇದ್ದಕ್ಕಿದ್ದಂತೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರವಾಗಿದ್ದರಿಂದ ಇಡೀ ಕಟ್ಟಡವನ್ನು ಸ್ವಚ್ಛಗೊಳಿಸುವ ಹಾಗೂ ಪೀಠೋಪಕರಣ ಜೋಡಿಸುವ ಕಾರ್ಯ ಅಪೂರ್ಣವಾಗಿಯೇ ಉಳಿದಿದೆ. ಪರಿಣಾಮ, ಕಚೇರಿ ಕೆಲಸಗಳು ಕುಂಟುತ್ತಾ ಸಾಗಿವೆ.
ಗಬ್ಬೆದ್ದು ನಾರುವ ಶೌಚಗೃಹ:
ವಿಶಾಲ ಪ್ರದೇಶದಲ್ಲಿ ನಿರ್ಮಿಸಿರುವ ಭವ್ಯ ಕಟ್ಟಡ ಎರಡು ಅಂತಸ್ತಿನಿಂದ ಕೂಡಿದ್ದು, ಕಟ್ಟಡದ ಹಿಂಬದಿಯ ಎರಡು ಪಾರ್ಶ್ವಗಳಲ್ಲಿ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆ ಕೊರತೆ ಹಾಗೂ ಈವರೆಗೆ ಬಳಕೆ ಮಾಡದೆ ಹಾಗೆಯೇ ಬಿಟ್ಟಿದ್ದರಿಂದ ಎಲ್ಲ ಶೌಚಗೃಹಗಳು ಅಶುಚಿತ್ವದಿಂದ ಕೂಡಿವೆ. ಗ್ರಾಮೀಣ ಭಾಗದಿಂದ ಬರುವ ಜನರು ಬೃಹತ್ ಕಟ್ಟಡದಲ್ಲಿ ತಮಗೆ ಬೇಕಾದ ಕಚೇರಿಗಳ ಕೊಠಡಿ, ಶೌಚಗೃಹ ಹುಡುಕುವುದೇ ಸವಾಲಿನ ಕೆಲಸವಾಗಿದೆ. ವಿಶಾಲವಾದ ಕಟ್ಟಡದಲ್ಲಿ ಯಾವ ಇಲಾಖೆ ಕಚೇರಿ ಎಲ್ಲಿದೆ ಎಂಬುದನ್ನು ತಿಳಿಯಲು ಸಾಕಷ್ಟು ಸಮಯ ಬೇಕಿದೆ. ಕಟ್ಟಡದ ಹೊರಭಾಗದಲ್ಲಿ ಸಾರ್ವಜನಿಕರಿಗಾಗಿ ಪ್ರತ್ಯೇಕ ಶೌಚಗೃಹಗಳನ್ನು ನಿರ್ಮಿಸಬೇಕು ಎಂಬುದು ಕಚೇರಿಗೆ ಭೇಟಿ ನೀಡುವ ಜನರ ಬೇಡಿಕೆಯಾಗಿದೆ.
ಅಂಗವಿಕಲರಿಗೆ ರ‌್ಯಾಂಪ್ ಅಗತ್ಯ:
ನೂರು ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ನಿರ್ಮಾಣ ಮಾಡಿರುವ ಕಟ್ಟದಲ್ಲಿ ಅಂಗವಿಕಲರು ಸುಲಭವಾಗಿ ಒಳಗೆ ಪ್ರವೇಶ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡದ ಪ್ರವೇಶ ದ್ವಾರದ ಬಳಿ ಮೆಟ್ಟಿಲುಗಳನ್ನು ಮಾತ್ರ ನಿರ್ಮಿಸಲಾಗಿದೆ. ಪರಿಣಾಮ, ವ್ಹೀಲ್‌ಚೇರ್ ಮೂಲಕ ಅಂಗವಿಕಲರು ಕಚೇರಿಗಳಿಗೆ ತೆರಳಲು ಕಷ್ಟಸಾಧ್ಯವಾಗಿದೆ. ಹೀಗಾಗಿ ಅಂಗವಿಕಲರು ಸುಲಭವಾಗಿ ತೆರಳಲು ರ‌್ಯಾಂಪ್ ನಿರ್ಮಿಸುವ ತುರ್ತು ಅಗತ್ಯವಿದೆ.
ಕೋಟ್
ಸಿದ್ಧಾರ್ಥನಗರ ಬಡಾವಣೆಯಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಗೆ ಬನ್ನೂರು ಭಾಗದಿಂದ ಬರುವವರ ಅನುಕೂಲಕ್ಕಾಗಿ ಅಲ್ಲಿಯೇ ಬಸ್ ನಿಲುಗಡೆಗೆ ಅವಕಾಶ ನೀಡಲಾಗಿದೆ. ಆದರೆ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಭಾಗದಿಂದ ಬರುವವರಿಗೆ ತೊಂದರೆ ಆಗಿದೆ. ಮುಂದಿನ ದಿನಗಳಲ್ಲಿ ನಗರ ಸಾರಿಗೆ ಬಸ್ ಸಂಚಾರವನ್ನು ಹೆಚ್ಚಿಸುವ ಮೂಲಕ ಅನುಕೂಲ ಮಾಡಿಕೊಡಲಾಗುವುದು.
ಶ್ರೀನಿವಾಸ್, ವಿಭಾಗೀಯ ನಿಯಂತ್ರಣಧಿಕಾರಿ, ಕೆಎಸ್‌ಆರ್‌ಟಿಸಿ