ಜಿಲ್ಲೆ

ಜಿಲ್ಲಾಧಿಕಾರಿ ನಗರ ಪ್ರದಕ್ಷಿಣೆ

ಚಿಕ್ಕಬಳ್ಳಾಪುರ : ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಪ್ರತಿದಿನ ನಗರ ಪ್ರದಕ್ಷಿಣೆ ಪ್ರಾರಂಭಿಸಿದ್ದು ಬುಧವಾರ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ 19ನೇ ವಾರ್ಡ್ ವ್ಯಾಪ್ತಿಯ ಮಹಾಕಾಳಿ ರಸ್ತೆ, ಹಳೇ ಗಣಪತಿ ದೇವಾಲಯ ರಸ್ತೆ, ಸುಬ್ಬರಾಯನಪೇಟೆ, ಹಳೇ ಪ್ರಶಾಂತಿ ಬಾಲಮಂದಿರ ರಸ್ತೆ, ಬಜಾರ್ ರಸ್ತೆ ಸೇರಿ ಹಲವೆಡೆ ಕಾಲ್ನಡಿಗೆಯಲ್ಲಿ ಸಾಗಿ, ಸ್ಥಳೀಯರಿಂದ ಸಮಸ್ಯೆ ಆಲಿಸಿದರು.ರಸ್ತೆ ಮತ್ತು ಚರಂಡಿ ಸ್ವಚ್ಛತೆ, ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹ, ಹೋಟೆಲ್‌ಗಳಲ್ಲಿ ಶುಚಿತ್ವ, ಕರೊನಾ ಸೋಂಕು ತಡೆ ಮುಂಜಾಗ್ರತಾ ಕ್ರಮಗಳ ಪಾಲನೆ ಸೇರಿ ಇತರ ವ್ಯವಸ್ಥೆಗಳನ್ನು ಹಾಗೂ ಚಹಾ, ಟೀ ಅಂಗಡಿಗಳಲ್ಲಿ ಮಾಸ್ಕ್ ಅಳವಡಿಸಿ ಕೆಲಸ, ಪಾತ್ರೆಗಳನ್ನು ಬಿಸಿ ನೀರಿನಲ್ಲಿ ತೊಳೆಯುವಿಕೆ, ಗ್ರಾಹಕರು ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ ಬಗ್ಗೆ ಖುದ್ದು ವೀಕ್ಷಿಸಿದರು.

ಸಿಮೆಂಟ್ ಅಂಗಡಿಯಲ್ಲಿ ಕರೊನಾ ತಡೆ ಜಾಗೃತಿ ಬ್ಯಾನರ್ ಅಳವಡಿಸದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಗ್ರಾಹಕರು ಬಂದ ಸಂದರ್ಭದಲ್ಲಿ ಗಮನ ಸೆಳೆಯಲು ಕಡ್ಡಾಯವಾಗಿ ಮಾಹಿತಿ ಫಲಕ ಅಳವಡಿಸಬೇಕು ಎಂದು ಮಾಲೀಕರಿಗೆ ಸೂಚಿಸಿದರು.

ಒತ್ತುವರಿ ತೆರವಿಗೆ ಸೂಚನೆ : ವಾರ್ಡ್‌ನ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ವಸ್ತುಗಳನ್ನಿಟ್ಟುಕೊಂಡು ವಹಿವಾಟು ನಡೆಸುತ್ತಿರುವ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು ಮೊದಲೇ ರಸ್ತೆಗಳು ಕಿರಿದಾಗಿವೆ. ಇದರ ನಡುವೆ ಒತ್ತುವರಿ ಮಾಡಿಕೊಳ್ಳುವುದು ಸರಿಯಲ್ಲ. ಸುಗಮ ಸಂಚಾರಕ್ಕೆ ತೊಡಕಾಗುವುದಿಲ್ಲವೇ ಎಂದು ಪ್ರಶ್ನಿಸಿ, ತೆರವುಗೊಳಿಸಲು ಸೂಚಿಸಿದರು. ಯೋಜನಾಭಿವೃದ್ಧಿ ಕೋಶದ ನಿರ್ದೇಶಕಿ ರೇಣುಕಾ, ಪೌರಾಯುಕ್ತ ಲೋಹಿತ್, ನಗರಸಭಾ ಮಾಜಿ ಸದಸ್ಯ ಮಹಾಕಾಳಿ ಬಾಬು ಮತ್ತಿತರರು ಇದ್ದರು.