ಜಿಲ್ಲೆ

ಜಿಲ್ಲಾದ್ಯಂತ ಸರಳತೆಯಲ್ಲೇ 74ನೇ ಸ್ವಾತಂತ್ರ್ಯ ಸಂಭ್ರಮ

ಚಿಕ್ಕಬಳ್ಳಾಪುರ: ಶಾಲಾ-ಕಾಲೇಜು ವಿದ್ಯಾರ್ಥಿಗಳ ಗೈರು, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ ಪೊಲೀಸರ ಪಥ ಸಂಚಲನ, ಸಾಧಕರಿಗೆ ಸನ್ಮಾನ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ನಡೆಯಿತು.

ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿವಿಧ ತಂಡಗಳು ಮಾಸ್ಕ್ ಧರಿಸಿ, ಪರಸ್ಪರ ಅಂತರೊಂದಿಗೆ ಪಥ ಸಂಚಲನ ನಡೆಸಿದ್ದು ವಿಶೇಷವಾಗಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸೀಮಿತ ಸಂಖ್ಯೆಯಲ್ಲಿ ಸೇರಿದ್ದ ಜನರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರು.

ಜಿಲ್ಲಾಡಳಿತ, ಜಿಪಂ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಧ್ವಜಾರೋಹಣ ನೆರವೇರಿಸಿದರು. ಪರೇಡ್ ಕಮಾಂಡರ್ ಎನ್.ಎಲ್.ನಾಗೇಂದ್ರ ಪ್ರಸಾದ್ ಅವರೊಂದಿಗೆ ತೆರೆದ ವಾಹನದಲ್ಲಿ ಪಥಸಂಚಲನ ತಂಡಗಳನ್ನು ವೀಕ್ಷಿಸಿದ ಬಳಿಕ ಧ್ವಜವಂದನೆ ಸ್ವೀಕರಿಸಿದರು.

ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಗೃಹರಕ್ಷಕ ದಳ ಮತ್ತು ಎನ್‌ಸಿಸಿ, ಪೊಲೀಸ್ ವಾದ್ಯ ತಂಡ ಪಥ ಸಂಚಲನ ನಡೆಸಿತು. ಈ ಬಾರಿ ಯಾವುದೇ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿರಲಿಲ್ಲ. ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳೂ ನಡೆಯಲಿಲ್ಲ.

ಸಂಸದ ಬಿ.ಎನ್.ಬಚ್ಚೇಗೌಡ, ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಬಿ.ಫೌಜೀಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಮತ್ತಿತರರು ಇದ್ದರು.

ಹಲವರಿಗೆ ಸನ್ಮಾನ: ಕರೊನಾ ನಿಯಂತ್ರಣಕ್ಕೆ ಶ್ರಮಿಸಿದ ಜಿಲ್ಲಾ ಕರೊನಾ ಆಸ್ಪತ್ರೆಯ ಡಾ ಪ್ರಕಾಶ್, ಶುಶ್ರೂಷಕ ವಿನೋದ್, ಆರ್‌ಟಿಪಿಸಿಆರ್ ಪ್ರಯೋಗಾಲಯದ ತಂತ್ರಜ್ಞ ಸುರೇಶ್, ಆಶಾ ಕಾರ್ಯಕರ್ತೆ ಪರಗೋಡು ಪಾರ್ವತಮ್ಮ, ಆರೋಗ್ಯ ಸಹಾಯಕಿ ವಿಜಯಮ್ಮ, ಅಂಬ್ಯುಲೆನ್ಸ್ ಚಾಲಕ ಗಣೇಶ್, ಚಿಕ್ಕಬಳ್ಳಾಪುರ ನಗರಸಭೆ ಪೌರಕಾರ್ಮಿಕರಾದ ರಾಮಕ್ಕ, ಗೌರಿಬಿದನೂರು ನಗರಸಭೆ ಕಂದಾಯ ಅಧಿಕಾರಿ ಸಂತೋಷ್ ಕುಮಾರ್, ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ಭೂಮಿ ಸಮಾಲೋಚಕ ಎಂ.ಆರ್.ಮಧು, ಸಂಚಾರಿ ಪೊಲೀಸ್ ಠಾಣೆ ಎಎಸ್‌ಐ ವೇಣುಗೋಪಾಲ್, ಚಿಂತಾಮಣಿ ಪೊಲೀಸ್ ಪೇದೆ ಸರ್ವೇಶ, ಮುಸ್ಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರ್.ನರಸಿಂಹಮೂರ್ತಿ, ಕಲ್ಲೂಡಿ ಗ್ರಾಮಲೆಕ್ಕಾಧಿಕಾರಿ ವೈ.ಎ.ಅಬ್ದುಲ್ ಖಾದರ್ ಬಾಷಾ, ಕೋಟಗಲ್ ಪಿಡಿಒ ವಲ್ಲಿಭಾಷಾ ಮತ್ತು ಕರೊನಾ ಸೋಂಕು ಗುಣವಾದ ಗುಡಿಬಂಡೆ ಅಶ್ವತ್ಥಪ್ಪ, ಚಿಕ್ಕಬಳ್ಳಾಪುರದ ಕೃಷ್ಣಮೂರ್ತಿ, ಅಶೋಕ್, ತನ್ವಿಕ್, ಇಗ್ನೇಶಿ ಎಸ್.ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ವೈಯಕ್ತಿಯವಾಗಿ ಲ್ಯಾಪ್‌ಟ್ಯಾಪ್, 1 ಲಕ್ಷ ರೂ.ವಿತರಿಸಿದ ಸಚಿವ: ಸಚಿವ ಡಾ.ಕೆ.ಸುಧಾಕರ್ ವೈಯಕ್ತಿಕವಾಗಿ ರಾಷ್ಟ್ರಪತಿ ಪ್ರಶಸ್ತಿ ಪದಕ ವಿಜೇತ ಎಚ್.ನಂಜುಂಡಯ್ಯ ಅವರಿಗೆ 1 ಲಕ್ಷ ರೂ. ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಐಶ್ವರ್ಯ, ಮಹಮದ್ ಸಾದ್, ನವ್ಯಶ್ರೀ, ಎಸ್.ಸಿರಿಷಾ, ಆರ್.ಅಮೂಲ್ಯ, ಆರ್.ವರ್ಷಿಣಿ, ಎನ್.ವಿನುತಾ, ಎಂ.ವಿ.ರಮ್ಯಾ, ಕೆ.ಎನ್.ಚಂದನಾಗೆ ಲ್ಯಾಪ್‌ಟ್ಯಾಪ್ ವಿತರಿಸಿದರು.

ರಾಮರಾಜ್ಯ ನಿರ್ಮಾಣವಾಗಲಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯ ನಿರ್ಮಾಣ, ಗ್ರಾಮ ಸ್ವರಾಜ್ ಕನಸು ನನಸಾಗಿಸಲು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಸಚಿವ ಡಾ ಕೆ.ಸುಧಾಕರ್ ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿದರು. ಸ್ವಾತಂತ್ರ್ಯ ಹೋರಾಟದ ಇತಿಹಾಸ, ಮಹನೀಯರ ತ್ಯಾಗ, ಬಲಿದಾನ ಸ್ಮರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಬಲಿಷ್ಠ ರಾಷ್ಟ್ರ ನಿರ್ಮಾಣದ ಸೇವೆ ನಿರಂತರವಾಗಿರಬೇಕು ಎಂದರು. ಭಾರತವು ಆತ್ಮನಿರ್ಭರ ಯೋಜನೆಯಡಿ ಸ್ವಾವಲಂಬಿ ಶಕ್ತಿಯುತ ರಾಷ್ಟ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು ಸ್ವದೇಶಿ ಉತ್ಪನ್ನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.