ಚಿತ್ರದುರ್ಗ: ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಹಬ್ಬವಾದ ಸಂಕ್ರಾಂತಿ ಸಂಭ್ರಮ ಜಿಲ್ಲಾದ್ಯಂತ ಮನೆಮಾಡಿತ್ತು. ನಗರ ಪ್ರದೇಶದ ಜನರು ಮನೆಗಳಿಗಿಂತಲೂ ದೇಗುಲಗಳಲ್ಲಿ ವಿಶೇಷ ಪೂಜೆಯೊಂದಿಗೆ ಮಂಗಳವಾರ ಆಚರಿಸಿದ್ದು, ಹಲವೆಡೆ ಕಂಡು ಬಂದಿತು.
ಐತಿಹಾಸಿಕ ಕೋಟೆಯೊಳಗಿನ ದೇವರ ದರ್ಶನಕ್ಕಾಗಿ ಮುಂಜಾನೆಯಿಂದಲೇ ಭಕ್ತಸಾಗರವೇ ಹರಿದು ಬಂತು. ನಗರ ವ್ಯಾಪ್ತಿಯ ಪ್ರಸಿದ್ಧ ದೇಗುಲಗಳು ಇದಕ್ಕೆ ಹೊರತಾಗಿರಲಿಲ್ಲ. ಕಣ್ಣಾಯಿಸಿದ ಕಡೆಯಲೆಲ್ಲ ಜನಜಂಗುಳಿ. ವೈವಿಧ್ಯಮಯವಾಗಿ ಸಿಂಗರಿಸಿದ್ದ ವಿದ್ಯುದೀಪಾಲಂಕಾರ, ದೇವರ ಚಿತ್ರಗಳುಳ್ಳ ಸ್ವಾಗತ ಕೋರುವ ಕಮಾನುಗಳು ನಾರಿಯರು, ಚಿಣ್ಣರನ್ನು ಆಕರ್ಷಿಸಿದವು.
ಕೋಟೆನಗರಿಯ ನವದುರ್ಗೆಯರಾದ ದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜಮಾತೆ ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ ಸೇರಿ ದುರ್ಗಾಂಬಿಕಾ, ಮಲೆನಾಡು ಚೌಡೇಶ್ವರಿ, ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಬುಡ್ಡಮ್ಮ, ಕಾಳಿಕಮಠೇಶ್ವರಿ, ಬೆಟ್ಟದ ಗಣಪತಿ, ಮೇಲುದುರ್ಗದ ಹಿಡಂಭೇಶ್ವರ ಸೇರಿ ಹಲವು ದೇಗುಲಗಳಲ್ಲಿ ವಿವಿಧ ವರ್ಣದ ಪುಷ್ಪ, ಸ್ವೀಟ್ಸ್, ಡ್ರೈಫ್ರೂಟ್ಸ್‌ಗಳಿಂದ ದೇವರ ಮೂರ್ತಿಗಳನ್ನು ಭಕ್ತರ ಕಣ್ಮನ ಸೆಳೆಯುವಂತೆ ವಿಶೇಷವಾಗಿ ಅಲಂಕರಿಸಿ, ಅರ್ಚಕರು ಪೂಜೆ ನೆರವೇರಿಸಿದರು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಬರುವ ನಿರೀಕ್ಷೆ ಹಿನ್ನಲೆಯಲ್ಲಿ ದೇಗುಲಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿತ್ತು. ಮಂಗಳವಾರ ಬೆಳಗ್ಗೆ 5ರಿಂದ ರಾತ್ರಿ 10ರ ವರೆಗೂ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಇಷ್ಟ ದೇವತೆಗಳ ದರ್ಶನ ಪಡೆದರು. ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು. ಹಲವೆಡೆ ಏರ್ಪಡಿಸಿದ್ದ ಅನ್ನಸಂತರ್ಪಣೆಯಲ್ಲೂ ಪಾಲ್ಗೊಂಡರು.
ಇನ್ನೂ ಮನೆಗಳ ಮುಂಭಾಗ ವರ್ಣಮಯ ರಂಗೋಲಿಗಳ ಚಿತ್ತಾರ ಆಕರ್ಷಿಸಿದವು. ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿದ್ದವು. ತಳಿರು-ತೋರಣಗಳಿಂದ ಬಾಗಿಲು, ದೇವರ ಕೋಣೆ ಅಲಂಕಾರಗೊಂಡಿದ್ದವು. ದೇವರಿಗೆ ಎಡೆ ಸಮರ್ಪಿಸಿದ ಬಳಿಕ ಕುಟುಂಬ ಸಮೇತ ಸಡಗರದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.
ಸ್ವೀಟ್ಸ್, ಡ್ರೈಫ್ರೂಟ್ಸ್‌ಗಳಿಂದ ಅಲಂಕಾರ: ಉಚ್ಚಂಗಿಯಲ್ಲಮ್ಮ ದೇವಿಗೆ ಸಾವಿರಾರು ಡ್ರೈಫ್ರೂಟ್ಸ್‌ಗಳಿಂದ, ಬರಗೇರಮ್ಮ ದೇವಿಗೆ ಸಾವಿರಾರು ಬೆಸನ್ ಲಾಡು ಸೇರಿ ಪುಷ್ಪಗಳಿಂದ ವಿಶೇಷ ಅಲಂಕಾರ ಸೇವೆ ಜರುಗಿತು. ದೇಗುಲಗಳು ಗ್ರಾಮೀಣ ಸೊಗಡಿನೊಂದಿಗೆ ಭಕ್ತರನ್ನು ಆಕರ್ಷಿಸಿದವು. ಆವರಣ ಮುಂಭಾಗ ಕಬ್ಬಿನ ಜಲ್ಲೆ ಮತ್ತು ಬೆಲ್ಲದ ಅಚ್ಚಿನ ರಾಶಿ, ಸುತ್ತಲೂ ಹಲವು ಪದಾರ್ಥಗಳಿಂದ ಅಲಂಕರಿಸಲಾಗಿತ್ತು.
ಧಾನ್ಯಗಳನ್ನು ರಾಶಿಯಾಕಿ ಆಚರಣೆ: ಜಿಲ್ಲೆಯ ಹಲವು ಗ್ರಾಮೀಣ ಭಾಗಗಳಲ್ಲಿ ರೈತರು ತಾವು ಬೆಳೆದ ಧಾನ್ಯಗಳನ್ನು ಗುಡ್ಡೆಯಾಕಿ ವಿಶಿಷ್ಟವಾಗಿ ಸಂಕ್ರಾಂತಿ ಹಬ್ಬ ಆಚರಿಸುವ ಪರಂಪರೆ ಇದೆ. ಹೀಗಾಗಿ ರಾಶಿಯಾಕಿ, ರಾಸುಗಳಿಗೆ ವಿವಿಧ ವಸ್ತುಗಳಿಂದ ಸಿಂಗರಿಸಿ ಆಚರಿಸಿದರು. ನಗರ, ಪಟ್ಟಣ, ಹಳ್ಳಿಗಳಲ್ಲಿ ಸಂಜೆ ಹೆಣ್ಣು ಮಕ್ಕಳು ಸ್ನೇಹಿತರಿಗೆ, ನೆರೆ-ಹೊರೆಯವರಿಗೆ, ಸಂಬಂಧಿಕರಿಗೆ ಎಳ್ಳು-ಬೆಲ್ಲ ಹಂಚುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.