ಚಿತ್ರದುರ್ಗ: ನಗರ ಸೇರಿ ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ತ್ಯಾಗ ಬಲಿದಾನದ ಪ್ರತೀಕವಾದ ಈದ್-ಅಲ್-ಅಜ್‌ಹಾವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಶನಿವಾರ ಆಚರಿಸಿದರು.
ಇಬ್ರಾಹೀಮರ ಕುಟುಂಬದ ತ್ಯಾಗ-ಬಲಿದಾನಗಳನ್ನು ಸ್ಮರಿಸಿ, ಆರಾಧಿಸುವ ಈ ಬಕ್ರೀದ್ ಹಬ್ಬಕ್ಕೆ ನಗರದ ವಿವಿಧ ಮೂಲೆಗಳಿಂದ ಸಮುದಾಯದ ಹಲವರು ಬೆಳಗ್ಗೆಯಿಂದಲೇ ಈದ್ಗಾ ಮೈದಾನ ಪ್ರವೇಶಿಸಲು ಮುಂದಾದರು. ಇಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ, ಶ್ರೇಷ್ಠ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕೆಲವೇ ನಿಮಿಷಗಳಲ್ಲಿ ಮೈದಾನ ಭರ್ತಿಯಾಯಿತು.
ಶ್ವೇತ ವಸ್ತ್ರಧಾರಿಗಳಾಗಿದ್ದ ಎಲ್ಲರೂ ಒಬ್ಬರ ಹಿಂದೆ ಮತ್ತೊಬ್ಬರಂತೆ ಸಾಲಾಗಿ ಕುಳಿತರು. ಮೌಲ್ವಿಗಳು ಸೂಚನೆ ನೀಡುತ್ತಿದ್ದಂತೆ ಅಲ್ಲಾಹು ಸ್ಮರಣೆಯೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಾವಪರವಶರಾದರು. ಇದಕ್ಕೆ ಜಿಲ್ಲೆಯ ಹಲವು ಮಸೀದಿಗಳು ಕೂಡ ಹೊರತಾಗಿರಲಿಲ್ಲ. ಬಳಿಕ ಪರಸ್ಪರ ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ಜಾಮೀಯಾ, ಜುಮ್ಮಾ ಮಸೀದಿ, ಬಡಮಕಾನ್, ಚಂದ್ರವಳ್ಳಿ, ಎಪಿಎಂಸಿ ಹಾಗೂ ಅಗಸನಕಲ್ಲು ಸಮೀಪವಿರುವ ಈದ್ಗಾ ಮೈದಾನಗಳಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಮುದಾಯದ ಮುಖಂಡರಾದ ಎಂ.ಕೆ. ತಾಜ್‌ಪೀರ್, ಮಹಮ್ಮದ್ ಅಹಮ್ಮದ್ ಪಾಷ, ಅಲ್ಲಾಭಕ್ಷ್, ಟಿಪ್ಪು ಖಾಸಿಂ ಆಲಿ, ಎಂ.ಸಿ.ಒ. ಬಾಬು, ಮುಹೀಬುಲ್ಲಾ, ಜಾಕೀರ್ ಹುಸೇನ್ ಇತರರಿದ್ದರು.