ಜಿಲ್ಲೆ

ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಶ್ರೀರಾಮನವಮಿ ಆಚರಣೆ : ಎಲ್ಲೆಡೆ ಅನ್ನದಾನ, ಪಾನಕ, ಕೋಸಂಬರಿ, ಮಜ್ಜಿಗೆ ವಿತಣೆ

Kolar

ಕೋಲಾರ: ಜಿಲ್ಲಾದ್ಯಂತ ಶ್ರೀರಾಮನವಮಿಯನ್ನು ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶ್ರೀರಾಮ, ಆಂಜನೇಯ ಮತ್ತಿತರ ದೇವಾಲಯಗಳಲ್ಲಿ ಭಾನುವಾರ ಮುಂಜಾನೆಯಿಂದಲೇ ವಿಶೇಷ ಪೂಜೆ, ಹೋಮ, ಹವನ ಏರ್ಪಡಿಸಿದ್ದು, ಭಕ್ತರು ಸಾಲುಗಟ್ಟಿನಿಂತು ದೇವರ ದರ್ಶನ ಪಡೆದುಕೊಂಡರು. ನಗರ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಕಡೆ ದಾರಿಹೋಕರನ್ನು ಕರೆದು ಅನ್ನದಾನ, ಪ್ರಸಾದ ವಿನಿಯೋಗ, ಪಾನಕ, ಕೋಸಂಬರಿ ಮತ್ತು ಮಜ್ಜಿಗೆ ವಿತರಣೆ ಮಾಡಲಾಯಿತು.

ಯಲ್ದೂರಿನ ಕೋದಂಡ ರಾಮಸ್ವಾಮಿ, ವಕ್ಕಲೇರಿ ಶ್ರೀರಾಮ ದೇವಾಲಯ, ಬಿಳಿಬೆಟ್ಟದ ಆಂಜನೇಯಸ್ವಾಮಿ, ಆವನಿ ರಾಮಲಿಂಗೇಶ್ವರ, ಮುಳಬಾಗಿಲು ಆಂಜನೇಯಸ್ವಾಮಿ, ಕೋಲಾರದ ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ, ಬಸ್​ ನಿಲ್ದಾಣ ಬಳಿಯ ದೊಡ್ಡಾಂಜನೇಯ ಸ್ವಾಮಿ, ಶಾರದಾ ಟಾಕೀಸ್​ ರಸ್ತೆಯ ವಕ್ಕಲೇರಿ ಆಂಜನೇಯಸ್ವಾಮಿ, ಟೇಕಲ್​ ರಸ್ತೆಯ ಆಲದ ಮರದ ಆಂಜನೇಯಸ್ವಾಮಿ, ಕಾಳಮ್ಮಗುಡಿ ರಸ್ತೆಯ ಕೋಟೆ ಆಂಜನೇಯಸ್ವಾಮಿ, ಮಾಲೂರಿನ ಕೋದಂಡರಾಮಸ್ವಾಮಿ, ಸೀತಹಳ್ಳಿಯ ಆಂಜನೇಯಸ್ವಾಮಿ ಸೇರಿ ಅನೇಕ ಕಡೆ ಭಕ್ತರ ದಂಡೇ ನೆರೆದಿತ್ತು. ದೇವಾಲಯಗಳನ್ನು ವಿದ್ಯುತ್​ ದೀಪಾಲಂಕಾರದಿಂದ ಸಿಂಗರಿಸಲಾಗಿದ್ದು, ಸಂಕೀರ್ತನೆ, ರಾಮನಾಮ ಜಪ ಮತ್ತು ಇತರ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕೋಲಾರ ಸಮೀಪದ ಕೊಂಡರಾಜನಹಳ್ಳಿಯಲ್ಲಿ ಪ್ರತಿ ಮನೆಯಿಂದ ಧಾನ್ಯ ಸಂಗ್ರಹಿಸಿ ಆಂಜನೇಯ ದೇವಾಲಯ ಬಳಿ ಅನ್ನಛತ್ರ ಏರ್ಪಡಿಸಿದ್ದು, ಊರಿನ ಜನರು ಮತ್ತು ದಾರಿಹೋಕರನ್ನು ಕರೆದು ಊಟ ಬಡಿಸಲಾಗುತ್ತಿತ್ತು. ಯಾವ ರಸ್ತೆ, ದೇವಾಲಯ ಬಳಿ ಹೋದರೂ ಪೆಂಡಾಲ್​ ಹಾಕಿಸಿ ಅನ್ನದಾನ, ಪ್ರಸಾದ, ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸ್​, ಕಾರು, ದ್ವಿಚಕ್ರವಾಹನಗಳನ್ನು ತಡೆದು ಜನರನ್ನು ಕರೆದು ಪ್ರಸಾದ ಮತ್ತು ಪಾನಕ, ಕೋಸಂಬರಿ ವಿತರಣೆ ಮಾಡಲಾಯಿತು.

ಕೋಲಾರದ ಗಾಂಧಿ ವನದ ಬಳಿ ಶ್ರೀರಾಮಸೇನೆಯಿಂದ, ಟೇಕಲ್​ ರಸ್ತೆಯ ವೇಣುಗೋಪಾಲಸ್ವಾಮಿ ದೇವಾಲಯ ಬಳಿ ವೇಣುಗೋಪಾಲಸ್ವಾಮಿ ಯುವ ಬಳಗದಿಂದ ಪಾನಕ ಮಜ್ಜಿಗೆ ವಿತರಿಸಲಾಯಿತು. ವಕ್ಕಲೇರಿಯಲ್ಲಿ ಶ್ರೀರಾಮ, ಸೀತಾದೇವಿ, ಲಕ್ಷ$್ಮಣ ಮತ್ತು ಆಂಜನೇಯಸ್ವಾಮಿಯ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ಅಮ್ಮೇರಹಳ್ಳಿಯಲ್ಲಿ ಗಂಗಮ್ಮ, ಚೌಡೇಶ್ವರಮ್ಮನ ಉತ್ಸವ ಆಯೋಜಿಸಲಾಗಿತ್ತು.

ಚೋಳಘಟ್ಟದಲ್ಲಿ ಶ್ರೀರಾಮನವಮಿ: ವೇಮಗಲ್​ ಹೋಬಳಿ ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಳಘಟ್ಟದಲ್ಲಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮನವಮಿ ಪ್ರಯುಕ್ತ ಗ್ರಾಮಸ್ಥರಿಂದ ಸುತ್ತಮುತ್ತಿನ ಗ್ರಾಮಸ್ಥರಿಗೆ ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜಸೇವಕ ಸಿ.ಎಂ.ಆರ್​ ಶ್ರೀನಾಥ್​, ಮದ್ದೇರಿ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್​, ಕೆ.ಮಲ್ಲಂಡಹಳ್ಳಿ ಲೋಕೇಶ್​, ಯುವ ಮುಖಂಡರಾದ ದೇವರಾಜ್​, ಮಂಜುನಾಥ ಇದ್ದರು.