ಜಿಲ್ಲೆ

ಜಿಲ್ಲಾದ್ಯಂತ ಮಂಗಳಗೌರಿ ವ್ರತಾಚರಣೆ ಸಂಭ್ರಮ

ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಮೊದಲ ಮಂಗಳವಾರ ‘ಮಂಗಳಗೌರಿ’ ವ್ರತಾಚರಣೆಯನ್ನು ಹಿಂದು ಧರ್ಮದ ಬಹುತೇಕ ಮಹಿಳೆಯರು ಸಂಭ್ರಮದಿಂದ ಆಚರಿಸಿದರು.

ವ್ರತಾಚರಣೆ ಅಂಗವಾಗಿ ದೇವರ ಕೋಣೆಗಳು ಶುಚಿಗೊಂಡಿದ್ದವು. ಮಂಗಳಗೌರಿ ಮಾತೆಯ ಮೂರ್ತಿ ಪ್ರತಿಷ್ಠಾಪಿಸಿ, ತಳಿರು-ತೋರಣಗಳಿಂದ ಅಲಂಕರಿಸಿ, ಎಂದಿನ ಪರಂಪರೆಯಂತೆ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಸಂಬಂಧಿಕರು, ಅಕ್ಕ-ಪಕ್ಕದ ಮನೆಯವರನ್ನು ಕರೆದು ಅರಿಶಿಣ-ಕುಂಕುಮ, ಫಲ-ತಾಂಬೂಲದೊಂದಿಗೆ ಉಡಿ ತುಂಬುವ ಮೂಲಕ ಹಬ್ಬದ ಶುಭಾಶಯ ಪರಸ್ಪರ ವಿನಿಮಯ ಮಾಡಿಕೊಂಡರು.

ಮೊದಲ ಮಂಗಳವಾರದಿಂದ ಆರಂಭವಾಗುವ ಈ ವ್ರತಾಚರಣೆಯೂ ನಾಲ್ಕು ವಾರವೂ ಅತ್ಯಂತ ವಿಶೇಷ, ವೈಭವೋಪೇತವಾಗಿ ಪೂಜೆ ನೆರವೇರಿಸುವ ಮೂಲಕ ಮಹಿಳಾ ಭಕ್ತರು ಭಕ್ತಿಯಲ್ಲಿ ಮಿಂದೇಳಲಿದ್ದಾರೆ. ಕುಟುಂಬಕ್ಕೆ ಮಂಗಳವನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸಲಿದ್ದಾರೆ.

ಶಕ್ತಿದೇವತೆಗಳಿಗೆ ವಿಶೇಷಾಲಂಕಾರ

ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಗೆ ಮಂಗಳವಾರ ವಿವಿಧ ಬಗೆಯ ತರಕಾರಿಗಳಿಂದ ಅರ್ಚಕರು ವಿಶೇಷವಾಗಿ ಅಲಂಕರಿಸಿದ್ದರು. ಸಾವಿರಾರು ಭಕ್ತರು ಕೋಟೆಯನ್ನು ಏರಿದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ, ಗ್ರಾಮದೇವತೆ ಕುಂಚಿಗನಾಳ್ ಕಣಿವೆಮಾರಮ್ಮ ಸೇರಿ ಶಕ್ತಿದೇವತೆ ದೇಗುಲಗಳಲ್ಲಿ ದೇವಿಯರ ಮೂರ್ತಿಗಳಿಗೆ ಭಕ್ತರ ಕಣ್ಮನ ಸೆಳೆಯುವಂತೆ ಪುಷ್ಪಗಳಿಂದ ವೈಭವೋಪೇತವಾಗಿ ಅಲಂಕರಿಸಲಾಗಿತ್ತು. ಹಲವೆಡೆ ಬೆಳಗ್ಗೆ 11ರಿಂದ ರಾತ್ರಿ 9ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.