ಚಿತ್ರದುರ್ಗ: ಶಾಂತಿಧೂತ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ನಗರ ಸೇರಿ ಜಿಲ್ಲಾದ್ಯಂತ ಇಸ್ಲಾಂ ಧರ್ಮೀಯರು ಈದ್ ಮಿಲಾದ್ ಹಬ್ಬವನ್ನು ಎಂದಿನಂತೆ ಸಾಂಪ್ರದಾಯಿಕವಾಗಿ ಸೋಮವಾರ ಸಂಭ್ರಮದ ಜತೆಗೆ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಮಸೀದಿ ಸೇರಿ ಮನೆಗಳಲ್ಲೂ ಮುಂಜಾನೆ ಮತ್ತು ಸಂಜೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಿಲ್ಲೆಯ ನಗರ, ಪಟ್ಟಣ ಸೇರಿ ಹಲವೆಡೆ ಭವ್ಯ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು.
ಚಿತ್ರದುರ್ಗದ ಬಡಾಮಕಾನ್‌ನಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಮುದಾಯದ ಯುವಕರು ಪಟಾಕಿ ಸಿಡಿಸುವುದರ ಜತೆಗೆ ಕುಣಿದು ಸಂಭ್ರಮಿಸಿದರು.
ಶ್ವೇತವಸ್ತ್ರ ಧರಿಸಿದ್ದ ಸಾವಿರಾರು ಜನರು ಏಕಕಾಲಕ್ಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಾರ್ಗದುದ್ದಕ್ಕೂ ಸುಗಂಧ ದ್ರವ್ಯ ಪಸರಿಸಿತ್ತು. ಧರ್ಮ ಗುರುಗಳ, ಮುಖಂಡರ ಮಾರ್ಗದರ್ಶನದಂತೆ ಸಾಗಿತು.
ಮೆರವಣಿಗೆ ಸಾಗಿದ ಕಿತ್ತೂರುರಾಣಿ ಚೆನ್ನಮ್ಮ, ಗಾಂಧಿ ವೃತ್ತ, ಚಿಕ್ಕಪೇಟೆ, ಕೋಟೆ ರಸ್ತೆ, ಅಸರ್ ಮೊಹಲ್ಲಾ ಸೇರಿ ವಿವಿಧೆಡೆ ಹಸಿರು ಮತ್ತು ಬಿಳಿ ಬಣ್ಣದ ಬಾವುಟ-ಬಂಟಿಗ್ಸ್‌ಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಅದರೊಳಗೆ ಅರ್ಧ ಚಂದ್ರನ ಮೇಲೆ ನಕ್ಷತ್ರಾಕೃತಿ ಚಿತ್ರಗಳು ಕಂಡು ಬಂದವು. ಅನೇಕರು ಕೈಯಲ್ಲಿ ಬಾವುಟ ಹಿಡಿದು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಲ್ಲಿ ಸಂಚರಿಸಿದರು.
ಸಮುದಾಯದವರು ಪರಸ್ಪರ ಅಪ್ಪಿಕೊಳ್ಳುವ ಮೂಲಕ ಅಷ್ಟೇ ಅಲ್ಲದೆ, ದೂರವಾಣಿ ಕರೆ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಂದೇಶ ರವಾನಿಸುವುದರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.
ಜಿಲ್ಲೆಯ ಹಲವು ಮಸೀದಿಗಳಲ್ಲಿ ಧರ್ಮಗುರು, ಮೌಲ್ವಿ, ಪೇಶ್‌ಇಮಾಮ್, ಮೌಝಿನ್ ಹಾಗೂ ಸಿಬ್ಬಂದಿ ಕೂಡ ಪ್ರಾರ್ಥನೆಯಲ್ಲಿ ತಲ್ಲೀನರಾಗಿದ್ದು ಕಂಡು ಬಂದಿತು. ನಗರ, ಗ್ರಾಮ, ಪಟ್ಟಣಗಳಲ್ಲೂ ಮೆರವಣಿಗೆ ನಡೆದಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಮಸೀದಿಗಳ ಬಳಿಯೂ ಸಿಬ್ಬಂದಿ ನಿಯೋಜಿಸಲಾಗಿತ್ತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಅನ್ವರ್ ಪಾಷಾ, ಜಿಲ್ಲಾ ಅಧ್ಯಕ್ಷ ಇಕ್ಬಾಲ್‌ಹುಸೇನ್ (ಎಂಸಿಒ ಬಾಬು), ಮುಖಂಡರಾದ ಸರ್ದಾರ್ ಅಹಮದ್ ಮಹಮ್ಮದ್ ಪಾಷಾ, ಟಿಪ್ಪು ಖಾಸಿಂ ಆಲಿ, ನಯಾಜ್, ಅಬ್ದುಲ್ಲಾ, ಸೈಯದ್ ಅಲ್ಲಾಭಕ್ಷಿ, ಸೈಯದ್‌ಖುದ್ದೂಸ್, ಇರ್ಫಾನ್, ಮುಹೀಬುಲ್ಲಾ, ಸಾಧಿಕ್ ಭಾಷಾ, ಬಾಳೆಕಾಯಿ ಶ್ರೀನಿವಾಸ್ ಇತರರಿದ್ದರು.