ಜಿಲ್ಲೆ

ಜಿಲ್ಲಾದ್ಯಂತ ಅರ್ಥಪೂರ್ಣ ರಾಮನಾಮ ಸ್ಮರಣೆ:ಪ್ರಸಾದ ವಿನಿಯೋಗ

ಹಾಸನ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡ ಭವ್ಯ ಶ್ರೀರಾಮ ಮಂದಿರ ಸಂಭ್ರಮಾಚರಣೆ ಜಿಲ್ಲಾದ್ಯಂತ ಸೋಮವಾರ ಮನೆ ಮಾಡಿತ್ತು.
ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ರಾಮ ಭಕ್ತರು ವಿವಿಧ ಸೇವೆಗಳ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು. ಬೆಳಿಗ್ಗೆಯಿಂದಲೇ ವಿವಿಧ ದೇವಾಲಯಗಳಲ್ಲಿ ಪೂಜೆ, ಶ್ರೀರಾಮ ತಾರಕ ಹೋಮ, ಹವನ ಸೇರಿ ವಿವಿಧ ಕೈಂಕರ್ಯಗಳು ನೆರವೇರಿದವು. ಊರ ಹಬ್ಬದಂತೆ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪ್ರತಿ ನಗರ ಮತ್ತು ಬಡಾವಣೆಯಲ್ಲಿ ಯುವಕರು ರಾಮನ ಘೋಷಣೆ ಕೂಗುತ್ತಾ ಕುಣಿದು ಕುಪ್ಪಳಿಸಿದರು.
ಬಂದ ಭಕ್ತರಿಗೆ ಪಾನಕ, ಕೋಸಂಬರಿ ಸೇರಿದಂತೆ ವಿವಿಧ ರೀತಿಯ ಪ್ರಸಾದ ವಿನಿಯೋಗ ಮಾಡಲಾಯಿತು. ವಿವಿಧ ತಂಡಗಳು ಆಗಮಿಸಿ ಸಾಮೂಹಿಕ ಭಜನಾ ಕಾರ್ಯಕ್ರಮದ ಮೂಲಕ ರಾಮನ ನೆನೆದರು. ಹಿರಿಯ ಜೀವಗಳು ನೆರೆದು ಹಾಡಿಗೆ ತಕ್ಕ ಕೈ ಚಪ್ಪಾಳೆ ಹಾಕುವ ಮೂಲಕ ಭಾವ ಪರವಶರಾದರು.
ವಿವಿಧ ಸಂಘಟನೆಗಳ ಮುಖಂಡರು, ಕೇಸರಿ ಶಾಲುಧಾರಿಗಳಾಗಿ ನಗರದ ವಿವಿಧೆಡೆ ಬೈಕ್ ರ‌್ಯಾಲಿ ನಡೆಸುವ ಮೂಲಕ ಜೈ ಶ್ರೀರಾಮ್ ಘೋಷಣೆ ಮೊಳಗಿಸಿ ತಮ್ಮ ಭಕ್ತಿ ಭಾವ ಪ್ರದರ್ಶಿಸಿದರು.
ದೇವಾಲಯದ ಒಳಗೆ ಹಾಗೂ ಮುಂಭಾಗ, ಪೂರ್ಣಾಹುತಿ, ಮಹಾ ಮಂಗಳಾರತಿ, ಸಾಮೂಹಿಕ ಶ್ರೀ ರಾಮತಾರಕ ಹೋಮ ನಡೆದವು. ಇಸ್ಕಾನ್ ದೇವಾಲಯದವರು ಸಾಮೂಹಿಕವಾಗಿ ಹಾಡಿ ಕುಣಿಯುವುದರೊಂದಿಗೆ ಹರೇ ಕೃಷ್ಣ, ಹರೇ ರಾಂ ಭಜನೆ ಮಾಡಿದ್ದು ಗಮನಾರ್ಹವಾಗಿತ್ತು.
ನಗರದ ಕೆ.ಆರ್.ಪುರಂ 7ನೇ ಅಡ್ಡರಸ್ತೆ ಪೂರ್ತಿ ಮಹಿಳೆಯರು ರಂಗೋಲಿ ಬಿಡಿಸುವ ಮೂಲಕ ಸಮಾರಂಭಕ್ಕೆ ಮೆರಗು ತಂದರು. ಹಿಂದೂಪರ ಕಾರ್ಯಕರ್ತರು ಆಯಕಟ್ಟಿನ ಜಾಗಗಳಲ್ಲಿ ಶಾಮಿಯಾನ ಹಾಕಿ ಅಯೋಧ್ಯೆಯ ಕಾರ್ಯಕ್ರಮ ವೀಕ್ಷಣೆಗೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಿದ್ದರು.
ನಗರದ ಸೀತಾರಾಮಾಂಜನೇಯ ದೇವಸ್ಥಾನ, ಮೈಲಾರಲಿಂಗೇಶ್ವರ ದೇಗುಲ, ಗಣಪತಿ ಪೆಂಡಾಲ್, ತಣ್ಣೀರುಹಳ್ಳದ ಆಂಜನೇಯಸ್ವಾಮಿ ದೇವಾಲಯ, ಶಾಂತಿನಗರ, ವಿಜಯ ನಗರ ಸೇರಿ ಎಲ್ಲಾ ಕಡೆಯೂ ರಾಮನಾಮ ಸ್ಮರಣೆ ಅರ್ಥಪೂರ್ಣವಾಗಿ ನಡೆಯಿತು. ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ಎಲ್ಲಾ ಕಡೆಯೂ ಕೈಗೊಳ್ಳಲಾಗಿತ್ತು. ಮುನ್ನೆಚ್ಚರಿಕೆಯಾಗಿ ಮಸೀದಿ ಮೊದಲಾದ ಕಡೆಗಳಲ್ಲಿ ಬಿಗಿ ಪೊಲೀಸ್ ಏರ್ಪಡಿಸಲಾಗಿತ್ತು.

ಪ್ರಧಾನಿ-ಹಿರಿಯರಿಗೆ ಧನ್ಯವಾದ:
ಸೀತಾರಾಮಾಂಜನೇಯ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಮಾಜಿ ಶಾಸಕ ಪ್ರೀತಂ ಜೆ.ಗೌಡ, ಹಿಂದೂ ಸಮಾಜ ಇಡೀ ಪ್ರಪಂಚದಲ್ಲಿ ಇಂದು ಅತೀವ ಸಂತಸ, ಭಕ್ತಿ, ಶ್ರದ್ಧೆಯಿಂದ ಶ್ರೀರಾಮನ ಜಪಿಸುತ್ತಿದೆ ಎಂದರು.
550 ವರ್ಷಗಳ ಪರಿಶ್ರಮ ಕರ ಸೇವಕರು ಹಾಗೂ ರಾಮ ಭಕ್ತರ ಹೋರಾಟದ ಫಲವಾಗಿ ಇಂದು ರಾಮಮಂದಿರ ವೈಭವ ಮರುಳಿಸಿದೆ. ಅನೇಕ ರೀತಿಯ ಪೂಜೆ, ಹೋಮ-ಹವನದೊಂದಿಗೆ ರಾಮನನ್ನು ಬರಮಾಡಿಕೊಳ್ಳಲಾಗಿದೆ.
ಎಲ್ಲೆಡೆ, ಮನೆ ಮನಗಳಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಮ್ಮಗಳ ಸುದೈವ, ನಮ್ಮ ಕಾಲಘಟ್ಟದಲ್ಲೇ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ಆಗಿದೆ. ತುಂಬಾ ಸಂತೋಷವಾಗುತ್ತಿದೆ. ಇದಕ್ಕಾಗಿ ಶ್ರಮಿಸಿ ಸಾಕಾರಗೊಳಿಸಿದವರಿಗೆ ಧನ್ಯವಾದ ಹೇಳಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ್ಯ ಸಿದ್ದೇಶ್ ನಾಗೇಂದ್ರ, ಮುಖಂಡ ಹೆಚ್.ಪಿ.ಕಿರಣ್,ಹರ್ಷಿತ್, ಮಹಿಪಾಲ್ ಮೊದಲಾದವರಿದ್ದರು.

ಯುವಕರಿಂದ ಬೈಕ್ ರ‌್ಯಾಲಿ:
ನಗರದಾದ್ಯಂತ ಯುವಕರು ಬೈಕ್ ರ‌್ಯಾಲಿ ಮೂಲಕ ಸಂಭ್ರಮಾಚರಿಸಿದರು. ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಯಾವುದೇ ಟ್ರಾಫಿಕ್ ಜಾಮ್ ಆಗದೆ ಸಾರ್ವಜನಿಕರಿಗೆ ಕಿರಿಕಿರಿ ಎನಿಸದೆ ನಡೆಸಿದ ರ‌್ಯಾಲಿ ಸಾರ್ವಜನಿಕರ ಮೆಚ್ಚುಗೆಗೂ ಕಾರಣವಾಯಿತು.

ಜೆಡಿಎಸ್‌ನಿಂದ ರಾಮ ಸ್ಮರಣೆ:
ಹಾಸನ: ನಗರ ಬಸ್ ನಿಲ್ದಾಣ ರಸ್ತೆ ಬಳಿ ಇರುವ ಪೆಂಡಾಲ್ ಶ್ರೀ ಗಣಪತಿ ಸೇವಾ ಸಮಿತಿ ಹಾಗು ಟ್ಯಾಕ್ಸಿ ನಿಲ್ದಾಣದಲ್ಲಿ ರಾಮ ನಾಮ ಸ್ಮರಣೆ ಮಾಡಲಾಯಿತು. ಶಾಸಕ ಎಚ್.ಪಿ.ಸ್ವರೂಪ್ ಅವರು ಪ್ರಸಾದ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನಲೆಯಲ್ಲಿ ಶ್ರೀ ಗಣಪತಿ ಸೇವಾ ಸಮಿತಿಯಿಂದ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಪಾನಕ, ಮಜ್ಜಿಗೆ ಹಾಗು ಕೋಸಂಬರಿಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಮ ಮಂದಿರವು ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ತಲೆ ಎತ್ತಿದೆ ಎಂದರು.
ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಚ್.ನಾಗರಾಜು ಅವರು ಮಾತನಾಡಿ, 2024ರ ಜ. 22 ಐತಿಹಾಸಿಕ ದಿನವಾಗಿದೆ. 500 ವರ್ಷಗಳ ಇತಿಹಾಸ 170 ವರ್ಷಗಳ ಹೋರಾಟಕ್ಕೆ ಈಗ ನ್ಯಾಯ ಸಿಕ್ಕಿದೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯಾಗಿ ದೇಶ ಸಂತೋಷಪಡುವಂತಾಗಿದೆ ಎಂದರು.
ಜಾತಿಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಜನರು ಶ್ರೀರಾಮನ ಜಪದಲ್ಲಿ ತೊಡಗಿದ್ದಾರೆ. ರಾಮರಾಜ್ಯದ ಕನಸು ನನಸಾಗಿದ್ದು, ಪ್ರತಿ ಪ್ರಜೆಗಳು ಸಂತೋಷದಿಂದ ಇರಲಿ ಎಂದು ಹಾರೈಸಿದರು.
ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ ಅವರು ಮಾತನಾಡಿದರು.
ಗಣಪತಿ ಸೇವಾ ಸಮಿತಿಯ ಅನಂತನಾರಾಯಣ್, ಎಂ.ಕೆ.ಕಮಲ್ ಕುಮಾರ್, ನಾಗೇಂದ್ರ, ಶೇಖರ್, ಮುರುಗೇಂದ್ರ, ನೀಲಾ ಕುಮಾರ್, ಕಿರಣ್, ದೀಫಕ್, ಗಿರೀಶ್ ಚನ್ನವೀರಪ್ಪ, ನೇತ್ರವತಿ ಗಿರೀಶ್ ಇತರರು ಇದ್ದರು.

ಶ್ರೀ ರಾಮತಾರಕ ಹೋಮ:
ನಗರದ ಸೀತಾರಾಮಾಂಜನೇಯ ದೇವಾಲಯ ದೇವನಗರಿಯಂತೆ ಸಿಂಗಾರಗೊಂಡಿತ್ತು. ಬೆಳಿಗ್ಗೆ 5 ರಿಂದಲೇ ಶ್ರೀರಾಮತಾರಕ ಹೋಮ ಪ್ರಾರಂಭಿಸಲಾಗಿತ್ತು. ಸಾರ್ವಜನಿಕರು ಸರದಿ ಸಾಲಿನಲ್ಲಿ ಬಂದು ಪ್ರಸಾದ ಸ್ವೀಕರಿಸಿದರು. ಸೀತಾರಾಮಾಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಶ್ರೀ ಕಾಂತ್, ಬ್ರಾಹ್ಮಣ ಯುವಜನ ಸಭಾ ಅಧ್ಯಕ್ಷೆ ರೂಪಾ ಮುರುಳಿ, ಪಲ್ಲವಿ ಮಂಜುನಾಥ್, ಸಂಧ್ಯಾ ನಾಗಭೂಷಣ್, ಸಂಧ್ಯಾ ಕೃಷ್ಣಮೂರ್ತಿ, ಅಶ್ವಿನಿ ರಂಗನಾಥ್ ಇತರರಿದ್ದರು.

ನೂರಾರು ಯುವಕರು ರಕ್ತದಾನ :
ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ 5ನೇ ವರ್ಷದ ಪುಣ್ಯ ಸ್ಮರಣೆ ಹಾಗು ಶ್ರೀರಾಮ ಪ್ರತಿಷ್ಠಾಪನೆ ಅಂಗವಾಗಿ ನಗರದ ಆರ್.ಸಿ.ರಸ್ತೆಯ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಜವೇನಹಳ್ಳಿ ಮಠದ ಮಠಾಧೀಶ ಶ್ರೀ ಸಂಗಮೇಶ್ವರ ಸ್ವಾಮೀಜಿ ಸಮಾರಂಭಕ್ಕೆ ಚಾಲನೆ ನೀಡಿದರು.
ನೂರಾರು ಯುವಕರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಪತ್ರಕರ್ತ ರವಿ ನಾಕಲಗೂಡು, ಕಟ್ಟಾಯ ಶಿವಕುಮಾರ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಮೋಹನ್, ಮಲ್ಲಿಕಾರ್ಜುನ್, ಅವಿನಾಶ್, ವೆಂಕಟೇಶ್, ಕೀರ್ತಿ ಕೆರೆಹಳ್ಳಿ, ಧನುಷ್, ಪ್ರವೀಣ್, ಮೋಹನ್ ಕುಮಾರ್ ಇತರರಿದ್ದರು.

ಕಂಗೊಳಿಸಿದ ರಂಗೋಲಿ:
ವಿಶೇಷ ಎಂದರೆ ನಗರ ಹಾಗೂ ಪಟ್ಟಣಗಳ ಕೆಲ ವೃತ್ತ ಹಾಗೂ ರಸ್ತೆಗಳು ಕೇಸರಿ ಮಯವಾಗಿದ್ದವು. ಶ್ರೀ ರಾಮಮಂದಿರ ಉದ್ಘಾಟನೆಗೆ ಶುಭಕೋರಿ, ಹಾಲಿ ಹಾಗೂ ಮಾಜಿ ಶಾಸಕರು, ಬಿಜೆಪಿ, ಜೆಡಿಎಸ್‌ನ ಆಯಾ ಪಕ್ಷಗಳ ಮುಖಂಡರು, ವಿವಿಧ ಅಂಗಡಿಯವರು ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸಿದ್ದರು. ರಾಮನ ಫೋಟೋ ಇಟ್ಟು ಪೂಜಿಸಿದರು. ಪ್ರಮುಖವಾಗಿ ನಗರದ ಕೆ.ಆರ್.ಪುರಂ ಮಸೀದಿ ಡೌನ್‌ಗಿರುವ ಸಿಮೆಂಟ್ ರಸ್ತೆ ತುಂಬೆಲ್ಲಾ ಹೆಂಗೆಳೆಯರು ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿದ್ದು ಗಮನಾರ್ಹವಾಗಿತ್ತು.