ಚಿತ್ರದುರ್ಗ: ಅಂಗಾರಕ ಸಂಕಷ್ಟಹರ ಚತುರ್ಥಿ ಆಚರಣೆ ಅಂಗವಾಗಿ ಜಿಲ್ಲಾದ್ಯಂತ ವಿಘ್ನನಿವಾರಕ ವಿನಾಯಕ ಸೇರಿ ಹಲವು ದೇಗುಲಗಳಲ್ಲಿ ಮಂಗಳವಾರ ವಿಶೇಷ ಪೂಜೆಗಳು ನೆರವೇರಿದವು.
ಚತುರ್ಥಿ ಹಿನ್ನೆಲೆಯಲ್ಲಿ ಜಿಲ್ಲೆಯ ನೂರಾರು ಗಣಪತಿ ದೇಗುಲಗಳಲ್ಲಿ ಸ್ವಾಮಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಜಲಾಭಿಷೇಕ, ಗಣಪತಿ ಅಷ್ಟೋತ್ತರ ಪಠಣದೊಂದಿಗೆ ಪುಷ್ಪ, ಡ್ರೈಫ್ರೂಟ್ಸ್ ಸೇರಿ ಇನ್ನಿತರೆ ವಸ್ತುಗಳಿಂದ ವಿಶೇಷ ಅಲಂಕಾರ ಸೇವೆ ನೆರವೇರಿದವು.
ಕೋಟೆ ಆವರಣದ ಬೆಟ್ಟದ ಮಹಾಗಣಪತಿ, ಅಧಿದೇವತೆ ಏಕನಾಥೇಶ್ವರಿ, ರಾಜಮಾತೆ ಉಚ್ಚಂಗಿಯಲ್ಲಮ್ಮ, ನಗರದೇವತೆ ಬರಗೇರಮ್ಮ, ಆನೆಬಾಗಿಲು ಸಮೀಪದ ಪ್ರಸನ್ನ ಗಣಪತಿ, ಪಿಎನ್‌ಟಿ ಕ್ವಾಟ್ರಸ್‌ನ ಶ್ರೀ ಸಿದ್ಧಿವಿನಾಯಕ, ಜೆಸಿಆರ್ ಬಡಾವಣೆಯ ವಿನಾಯಕ, ತಗ್ಗಿನ ಆಂಜನೇಯ ಸ್ವಾಮಿ, ನೀಲಕಂಠೇಶ್ವರ ಸ್ವಾಮಿ ಸೇರಿ ವಿವಿಧ ಗಣೇಶ ಮಂದಿರಗಳಲ್ಲಿ ವಿಶೇಷ ಪೂಜೆ, ಗಣಪತಿ ಮಂತ್ರದೊಂದಿಗೆ ಪ್ರಾರ್ಥನೆ ಜರುಗಿದವು.
ರಂಗಯ್ಯನ ಬಾಗಿಲು ಸಮೀಪದ ಮದಕರಿ ಮಹಾಗಣಪತಿ ದೇಗುಲದಲ್ಲಿ ಸ್ವಾಮಿ ನವಿಲು ವಾಹನದ ಮೇಲೆ ಕುಳಿತಿರುವ ಮಾದರಿಯಲ್ಲಿ ಅತ್ಯಂತ ವಿಶೇಷವಾಗಿ ಅಲಂಕರಿಸಲಾಗಿತ್ತು.
ಚತುರ್ಥಿ ವ್ರತಾಚರಣೆ ನಿಮಿತ್ತ ಕೆಲ ಭಕ್ತರು ಇಡೀ ದಿನ ಉಪವಾಸವಿದ್ದು, ರಾತ್ರಿ 10.10ಕ್ಕೆ ಚಂದ್ರನ ದರ್ಶನ ನಂತರ ಪ್ರಸಾದ ಸ್ವೀಕರಿಸಿದರು.
ಸಂಕಷ್ಟಿಯ ಮೊದಲ ಪೂಜೆ ಕಣ್ತುಂಬಿಕೊಳ್ಳಲು ಗಣಪತಿ ಸನ್ನಿಧಾನದ ಬಳಿ ನೂರಾರು ಭಕ್ತರು ನೆರೆದಿದ್ದರು. ಹೂವು, ಹಣ್ಣು, ಕಾಯಿಯೊಂದಿಗೆ ಭಕ್ತಿ ಸಮರ್ಪಿಸಿದರು. ಇದೇ ವೇಳೆ ವಿವಿಧೆಡೆ ಪ್ರಸಾದ ವಿತರಿಸಲಾಯಿತು.